ADVERTISEMENT

ರೆಡ್ಡಿ ಉಪಟಳದಿಂದ ಮುಕ್ತವಾದ ಶ್ರೀರಾಮುಲು; ನಾಯಕರಿಲ್ಲದ BJP; ಏನು ಪಕ್ಷದ ಕತೆ?

ಆರ್. ಹರಿಶಂಕರ್
Published 9 ಮೇ 2025, 7:48 IST
Last Updated 9 ಮೇ 2025, 7:48 IST
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ   

ಬಳ್ಳಾರಿ: ಒಂದು ಕಾಲಕ್ಕೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕೋಟೆ ಕಟ್ಟಿ ಮರೆಯುತ್ತಿದ್ದ ಕಾಂಗ್ರೆಸ್‌ ಅನ್ನು ಬೀಳಿಸಿ ಎರಡು ದಶಕಗಳ ಕಾಲ ಮೆರೆದ ಬಿಜೆಪಿ ಇಂದು ಜಿಲ್ಲೆಯಲ್ಲಿ ನಾಯಕತ್ವದ ನಿರ್ವಾತ ಎದುರಿಸುತ್ತಿದೆ.   

ಮಾಜಿ ಸಚಿವ ಶ್ರೀರಾಮುಲು ಅವರ ವಲಸೆ ನಿರ್ಧಾರದೊಂದಿಗೆ ಖಾಲಿ ಭಾವಕ್ಕೆ ದೂಡಲ್ಪಟ್ಟಿದ್ದ ಬಿಜೆಪಿ, ಈಗ ಮಾಜಿ ಸಚಿವ ಜನಾರ್ದನ ರೆಡ್ಡಿ ಜೈಲುಪಾಲಾಗುತ್ತಲೇ ನಾಯಕತ್ವ ದುರ್ಭೀಕ್ಷೆಗೆ ಸಿಲುಕಿದೆ. ಇದರ ರಾಜಕೀಯ ಪರಿಣಾಮಗಳ ಚರ್ಚೆಗಳು ಸದ್ಯ ಪಕ್ಷದಲ್ಲಿ ನಡೆಯುತ್ತಿವೆ. 

2023ರ ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿಯ ಎಲ್ಲ ಕ್ಷೇತ್ರಗಳಲ್ಲೂ ಮುಗ್ಗರಿಸಿ ಬಿದ್ದಿದ್ದ ಬಿಜೆಪಿ, ಅಲ್ಲಿಂದ ಇಲ್ಲಿಯ ವರೆಗೆ ಮೇಲೇಳಲು ಸಾಧ್ಯವೇ ಆಗಿಲ್ಲ. ಲೋಕಸಭೆ ಚುನಾವಣೆ, ಉಪ ಚುನಾವಣೆಗಳಲ್ಲಿ ಮರ್ಮಾಘಾತಗಳನ್ನು ಅನುಭವಿಸಿದೆ. ಅದರ ನಡುವೆ, ಒಂದೆರಡು ಬಾರಿ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಗಳಲ್ಲೂ ಏಟು ತಿಂದಿದೆ. ಹೀಗಿರುವಾಗಲೇ, ಜನಾರ್ದನ ರೆಡ್ಡಿ ವಿಚಾರದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ಬಿಜೆಪಿ ಪಾಲಿಗಂತಲೂ ಬರ ಸಿಡಿಲು ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.

ADVERTISEMENT

ಇದೇ ಸಿಬಿಐ ಪ್ರಕರಣದ ಕಾರಣಕ್ಕೆ ಬಳ್ಳಾರಿಯಿಂದ ಹೊರಗೆ ಉಳಿಯಬೇಕಾಗಿ ಬಂದಿದ್ದ ಜನಾರ್ದನ ರೆಡ್ಡಿ ಕಳೆದ ವರ್ಷ ಅಕ್ಟೋಬರ್‌ 3ರಂದು ಜಿಲ್ಲೆ ಪ್ರವೇಶ ಮಾಡಿದ್ದರು. ಅದರೊಂದಿಗೆ ಜಿಲ್ಲೆಯಲ್ಲಿ ಬಿಜೆಪಿ ಮತ್ತೆ ಚಿಗುರಿಕೊಳ್ಳುವ ನಿರೀಕ್ಷೆಯಲ್ಲಿತ್ತಾದರೂ, ನಂತರದ ಬೆಳವಣಿಗೆಗಳು ಪಕ್ಷವನ್ನು ಎರಡು ಹೋಳಾಗಿಸಿದ್ದವು. ಮುನಿಸೋ, ಕೋಪವೋ ಅಲ್ಲಿಯ ವರೆಗೆ ಹೇಗೋ ಒಂದಾಗಿ ಕಾಣುತ್ತಿದ್ದ ಬಿಜೆಪಿಯು ಬಣಗಳಾಗಿ ಒಡೆದು ಹೋಗಿತ್ತು.  

ಜನಾರ್ದನ ರೆಡ್ಡಿ ಅವರೊಂದಿಗೆ ಗುರುತಿಸಿಕೊಂಡು, ಶ್ರೀರಾಮುಲು ಕೆಂಗಣ್ಣಿಗೆ ಗುರಿಯಾಗಿದ್ದ ಬಣಗಳು ಈಗ ಅತಂತ್ರ ಸ್ಥಿತಿಗೆ ತಲುಪಿವೆ. ಸದ್ಯ ಜನಾರ್ದನ ರೆಡ್ಡಿ ಅನರ್ಹತೆಗೆ ಮೇಲ್ಮನವಿ ವಿಚಾರಣೆ ನ್ಯಾಯಾಲಯ ತಡೆ ನೀಡದೇ ಹೋದರೆ, ಅವರ ರಾಜಕೀಯ ಭವಿಷ್ಯವೇ ಮಸುಕಾಗಿ ಹೋಗಲಿದೆ. ಹಾಗೆ ಆದರೆ ನಮ್ಮ ಕತೆ ಏನು ಎಂಬ ಪ್ರಶ್ನೆ ಈ ಬಣಗಳನ್ನು ಕಾಡುತ್ತಿದೆ.  ಒಟ್ಟಿನಲ್ಲಿ ಸಿಬಿಐ ತೀರ್ಪು ಬಳ್ಳಾರಿ ಬಿಜೆಪಿ ಮೇಲೆ ನಡೆದ ನಿರ್ದಿಷ್ಟ ದಾಳಿಯೋ ಎಂಬಂತಾಗಿದೆ! 

ಲಾಭವೂ ಇಲ್ಲ ನಷ್ಟವೂ ಇಲ್ಲ: ಜನಾರ್ದನ ರೆಡ್ಡಿ ಜೈಲುಪಾಲಾಗಿರುವುದರಿಂದ ಬಿಜೆಪಿಗೆ ಲಾಭವೂ ಇಲ್ಲ ನಷ್ಟವೂ ಇಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅವರು ಸಿಲುಕಿಕೊಳ್ಳುವುದಕ್ಕೂ ಮೊದಲು ನಡೆದಿದ್ದೆಲ್ಲವೂ ಇತಿಹಾಸ. ಪ್ರಕರಣದಲ್ಲಿ ಸಿಲುಕಿ, ಜೈಲುಪಾಲಾಗಿ, ಪಕ್ಷದಿಂದ ಹೊರ ಹೋದಮೇಲೂ ಪಕ್ಷ ಬಳ್ಳಾರಿಯಲ್ಲಿ ಬದುಕಿತ್ತು. ಆದರೆ, ಅವರು ಪಕ್ಷ ಸೇರ್ಪಡೆಗೊಂಡು ಬಳ್ಳಾರಿಗೆ ಬಂದ ಬಳಿಕ ಪಕ್ಷ ಹೊಡೆದು ಹೋಗಿದೆ. ಶ್ರೀರಾಮುಲು ಹೊರದೂಡಲ್ಪಟ್ಟಿದ್ದಾರೆ. ಅವರು ಬಾರದೇ ಇದ್ದಿದ್ದರೂ ಪಕ್ಷ ಗಟ್ಟಿಯಾಗಿರುತ್ತಿತ್ತು. ಅವರ ಹೈಫೈ ಬದುಕು ಸಾಮಾನ್ಯ ಕಾರ್ಯಕರ್ತರಲ್ಲಿ ಅಸೂಯೆಗೆ ಕಾಣವಾಗಿತ್ತು. ಸಾಮಾನ್ಯರೂ ಅವರನ್ನು ಸಂಪರ್ಕಿಸಲೂ ಆಗುತ್ತಿರಲಿಲ್ಲ.  ಹೀಗಿದ್ದ ಮೇಲೆ ಅವರಿಲ್ಲದಿರುವುದು ಪಕ್ಷಕ್ಕೆ ನಷ್ಟ ಹೇಗಾಗಲಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ನಾಯಕರೊಬ್ಬರು.  

ಶ್ರೀರಾಮುಲುಗೆ ಅನುಕೂಲವೇ? 

ಜನಾರ್ದನ ರೆಡ್ಡಿ ಅವರು ಜೈಲುಪಾಲಾಗಿರುವುದು ಶ್ರೀರಾಮುಲು ಅವರಿಗೆ ನೆರವಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜನಾರ್ದನ ರೆಡ್ಡಿ ಕಾರಣಕ್ಕೇ ಅವರು ಬಳ್ಳಾರಿ ಜಿಲ್ಲೆ ತೊರೆದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರಕ್ಕೆ ವಲಸೆ ಹೋಗಬೇಕಾಯಿತು. ಈಗ ರೆಡ್ಡಿ ಇಲ್ಲ ಎಂಬ ಕಾರಣ ಮುಂದಿಟ್ಟು ಶ್ರೀರಾಮುಲು ಮತ್ತೆ ಬಳ್ಳಾರಿಗೆ ಬರಲೇನೂ ಸಾಧ್ಯವೇನು ಎಂದು ಪಕ್ಷದ ಕೆಲ ಮುಖಂಡರು ಪ್ರಶ್ನೆ ಮಾಡಿದ್ದಾರೆ. ಅಂಥ ನಿರ್ಧಾರ ಅವರ ಘನತೆಗೆ ದಕ್ಕೆಯುಂಟು ಮಾಡಲಿದೆ. ಅವರೇನಿದ್ದರೂ ಕೂಡ್ಲಿಯಲ್ಲೇ ಸ್ಪರ್ಧಿಸಬೇಕಾಗುತ್ತದೆ. ಜನಾರ್ದನ ರೆಡ್ಡಿ ಉಪಟಳ ರಾಮುಲುಗೆ ಇಲ್ಲವಾಗಬಹುದು. ಆದರೆ, ರಾಜಕೀಯವಾಗಿ ಮತ್ತೆ ಮೇಲೇಳಬೇಕಿದ್ದರೆ ಅವರು ಹೋರಾಡಲೇ ಬೇಕು ಎನ್ನುತ್ತಾರೆ ಪಕ್ಷದ ಮುಖಂಡರು. 

ಕಾಂಗ್ರೆಸ್‌ಗೆ ಲಾಭ? 

ಬಳ್ಳಾರಿಯಲ್ಲಿ ಬಿಜೆಪಿ ತನ್ನ ಒಂದೊಂದೇ ನಾಯಕರನ್ನು ಕಳೆದುಕೊಳ್ಳುತ್ತಿದ್ದರೆ, ಇತ್ತ ಕಾಂಗ್ರೆಸ್‌ ನಾವೆಯು ನಾಯಕರು, ಮುಖಂಡರಿಂದ ತುಂಬಿ ತುಳುಕುತ್ತಿದೆ. ಬಿಜೆಪಿಯಲ್ಲಿನ ಇದೇ ನಿರ್ವಾತ ಮುಂದುವರಿದರೆ, ಇನ್ನೂ ಒಂದು ಚುನಾವಣೆಯನ್ನು ಕಾಂಗ್ರೆಸ್‌ ಸುನಾಯಾಸವಾಗಿ ಗೆಲ್ಲಲಿದೆ ಎಂಬ ಮಾತನ್ನು ಬಿಜೆಪಿಗರೇ ಒಪ್ಪುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಡಜನ್‌ಗಟ್ಟಲೆ ನಾಯಕರನ್ನು ಎದುರಿಸಿ ನಿಲ್ಲಲು ಈ ಹೊತ್ತಿಗೆ ಬಿಜೆಪಿಯಲ್ಲಿ ಯಾರಿದ್ದಾರೆ ಎಂದು ಬೀಗುತ್ತಾರೆ ಕೈ ಪಾಳೆಯದ ನಾಯಕರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.