ADVERTISEMENT

ರಕ್ತದಾನ ದಿನ ಆಂದೋಲನಕ್ಕೆ ಡಿ.ಸಿ. ಸೂಚನೆ

ವಿಜಯನಗರ ಜಿಲ್ಲೆಯಲ್ಲಿ ರಕ್ತ ಸಂಗ್ರಹದ ಕೊರತೆ ನೀಗಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 15:20 IST
Last Updated 29 ಜೂನ್ 2022, 15:20 IST
ಅನಿರುದ್ಧ್‌ ಶ್ರವಣ್‌ ಪಿ. 
ಅನಿರುದ್ಧ್‌ ಶ್ರವಣ್‌ ಪಿ.    

ಹೊಸಪೇಟೆ: ‘ಜಿಲ್ಲೆಯ ಜನಸಂಖ್ಯೆ 16 ಲಕ್ಷವಿದ್ದು, ಶೇ 1ರಷ್ಟು ರಕ್ತ ಸಂಗ್ರಹವಿರಬೇಕು. ಆದರೆ, ಅದಕ್ಕಿಂತ ತೀರ ಕಡಿಮೆ ಇರುವುದು ಕಳವಳಕಾರಿ. ತಿಂಗಳಲ್ಲಿ ಒಂದು ದಿನ ಕಡ್ಡಾಯವಾಗಿ ರಕ್ತದಾನ ದಿನ ಆಂದೋಲನ ನಡೆಸಿ, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ., ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಬುಧವಾರ ನಡೆದ ರಕ್ತ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವರ್ಷಕ್ಕೆ 8 ರಕ್ತದಾನ ಶಿಬಿರಗಳು ಕಡ್ಡಾಯವಾಗಿ ನಡೆಸಬೇಕು. ಅದಕ್ಕಿಂತ ಹೆಚ್ಚು ಸಂಘಟಿಸಿ, ರಕ್ತದ ಕೊರತೆ ನೀಗಿಸಲು ಮುತುವರ್ಜಿ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿರುವ ‘ಬ್ಲಡ್‌ ಬ್ಯಾಂಕ್‌’ಗಳ ಮೂಲಕ ಪ್ರತಿ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ, ರಕ್ತ ಸಂಗ್ರಹಿಸಬೇಕು. ಅದಕ್ಕೆ ಬೇಕಿರುವ ಎಲ್ಲ ರೀತಿಯ ನೆರವು ಜಿಲ್ಲಾಡಳಿತ ಒದಗಿಸಲಿದೆ. ‘ಬ್ಲಡ್ ಬ್ಯಾಂಕ್‍’ಗಳು ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಉಲ್ಲಂಘಿಸಿದರೆ ಕ್ರಮ ಜರುಗಿಸಲಾಗುವುದು. ಪ್ರತಿ ಯೂನಿಟ್‌ ರಕ್ತಕ್ಕೆ ನಿಗದಿಪಡಿಸಿದ ದರದಲ್ಲೇ ಪಡೆಯಬೇಕು ಎಂದೂ ಹೇಳಿದರು.

ADVERTISEMENT

ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗಳ ರಕ್ತ ಶೇಖರಣಾ ಘಟಕಗಳ ಪರವಾನಗಿ ನವೀಕರಿಸಬೇಕೆಂದು ಸೂಚಿಸಿದರು. ರೆಡ್‍ಕ್ರಾಸ್ ಜಿಲ್ಲಾ ಘಟಕದ ಗೌರವ ಅಧ್ಯಕ್ಷರಾಗಿ ಡಾ.ಸೋಮಶೇಖರ ಅವರನ್ನು ಆಯ್ಕೆ ಮಾಡಲಾಯಿತು.

ಕ್ಷಯ ರೋಗ ನಿರ್ಮೂಲನೆಗೆ ಸೂಚನೆ:

‘ಕ್ಷಯ ರೋಗಿಗಳನ್ನು ಗುರುತಿಸಿ ಅವರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಬೇಕು. ಟಿ.ವಿ, ರೇಡಿಯೋ ಮೂಲಕ ಜಾಗೃತಿ ಮೂಡಿಸಬೇಕು. ವಿಜಯನಗರ ಜಿಲ್ಲೆಯಲ್ಲಿ 900 ಕ್ಷಯರೋಗಿಗಳಿದ್ದು, ಅವರಿಗೆ ಪೌಷ್ಟಿಕ ಆಹಾರದ ಕಿಟ್‌ ವಿತರಿಸಬೇಕು. ಸರ್ಕಾರದಿಂದ ಕ್ಷಯರೋಗಿಗಳಿಗೆ ನಿತ್ಯ ಪೋಷಣೆ ಯೋಜನೆಯಡಿ ಆರು ತಿಂಗಳವರಗೆ ₹500 ಸಹಾಯಧನ ನೀಡಲಾಗುತ್ತಿದೆ’ ಎಂದರು.

ಜಿಲ್ಲಾ ಕ್ಷಯ ವೇದಿಕೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ತಾಲ್ಲೂಕುಗಳಲ್ಲಿ ಲ್ಯಾಬ್‌ ಟೆಕ್ನಿಶಿಯನ್‌ಗಳು ತ್ವರಿತ ಗತಿಯಲ್ಲಿ ಪರೀಕ್ಷೆ ನಡೆಸಬೇಕು. ಖಾಲಿಯಿರುವ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಬೇಕು ಎಂದು ಸೂಚಿಸಿದರು. ಆರೋಗ್ಯ ಇಲಾಖೆಯ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.