ಸಂಡೂರು: ತಾಲ್ಲೂಕಿನ ಯಶವಂತನಗರ ಗ್ರಾಮದ ಹೊರವಲಯದ ರಾಘಾಪುರ ಕೆರೆಯಲ್ಲಿ ಸೋಮವಾರ ಈಜಲು ತೆರಳಿದ್ದ ಮೂವರು ಬಾಲಕರಲ್ಲಿ ಆಕಾಶ (17) ಎಂಬಾತ ಮುಳುಗಿದ್ದು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.
‘ಸ್ನೇಹಿತರೊಂದಿಗೆ ಬಲೂನ್ ಆಕಾರದ ಟ್ಯೂಬ್ ಮೂಲಕ ಕೆರೆಯಲ್ಲಿ ಈಜಾಡುವಾಗ ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಇಬ್ಬರು ನೀರಿನಲ್ಲಿ ಈಜಿ ದಡ ಸೇರಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕಳೆದ ಎರಡು ದಿನಗಳಿಂದ ಶೋಧ ಕಾರ್ಯ ನಡೆಸಲಾಗಿದ್ದು, ಈವರೆಗೂ ಬಾಲಕ ಸಿಕ್ಕಿಲ್ಲ. ಬಾಲಕ ಪತ್ತೆಯಾಗುವವರೆಗೂ ಶೋಧ ಕಾರ್ಯ ನಡೆಯಲಿದೆ’ ಎಂದು ಸಂಡೂರಿನ ಅಗ್ನಿಶಾಮಕ ಠಾಣೆಯ ಅಧಿಕಾರಿ ಮಂಜುನಾಥ ತಿಳಿಸಿದರು.
ಸಂಡೂರಿನ ತಹಶೀಲ್ದಾರ್ ಅನಿಲ್‍ಕುಮಾರ್, ಸಂಡೂರಿನ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.