ತೆಕ್ಕಲಕೋಟೆ (ಬಳ್ಳಾರಿ): ಪಟ್ಟಣದ 19ನೇ ವಾರ್ಡಿನ ದೇವಿನಗರ ಬಳಿ ಸಾರಿಗೆ ಸಂಸ್ಥೆಯ ಬಸ್ಸು ಬುಧವಾರ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಪಕ್ಕದ ಗದ್ದೆಗೆ ಜಾರಿದೆ. ಪರಿಣಾಮವಾಗಿ 12 ಮಂದಿ ಗಾಯಗೊಂಡಿದ್ದಾರೆ.
ಬಸ್ಸಿನಲ್ಲಿ 31 ಪ್ರಯಾಣಿಕರು ಇದ್ದರು. ಚಾಲಕ, ನಿರ್ವಾಹಕ ಸೇರಿದಂತೆ ತೀವ್ರವಾಗಿ ಗಾಯಗೊಂಡ ಐವರನ್ನು ಬಳ್ಳಾರಿ ವಿಮ್ಸ್‌ನ ಟ್ರಾಮ ಕೇರ್ ಸೆಂಟರ್‌ಗೆ ದಾಖಲಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾದ 7 ಮಂದಿಯನ್ನು ತೆಕ್ಕಲಕೋಟೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಬಳ್ಳಾರಿ ವಿಭಾಗಿಯ ನಿಯಂತ್ರಣಾಧಿಕಾರಿ ಚಾಮರಾಜ ತಿಳಿಸಿದ್ದಾರೆ.
ಬಳ್ಳಾರಿಯಿಂದ ರಾಷ್ಟ್ರೀಯ ಹೆದ್ದಾರಿ 150ಎ ಮೂಲಕ ಕಲಬುರಗಿಗೆ ತೆರಳುತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ತೆಕ್ಕಲಕೋಟೆ ಸಮೀಪ ವಾಹನವೊಂದನ್ನು ಓವರ್ ಟೇಕ್ ಮಾಡುವಾಗ ಚಾಲಕನ ನಿಯಂತ್ರಣ ಕಳೆದುಕೊಂಡಿತು. ಪರಿಣಾಮವಾಗಿ ರಸ್ತೆ ಪಕ್ಕದ 20 ಅಡಿ ಆಳದ ಗದ್ದೆಗೆ ಜಾರಿದೆ. ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಸಿರುಗುಪ್ಪ ಡಿವೈಎಸ್ಪಿ ವೆಂಕಟೇಶ್, ತೆಕ್ಕಲಕೋಟೆ ಪಿಎಸ್ಐ ತಾರಾ ಬಾಯಿ, ಸಿರುಗುಪ್ಪ ಸಾರಿಗೆ ಘಟಕದ ಉಮಾ ಮಹೇಶ್ವರಿ ಪರಿಶೀಲನೆ ನಡೆಸಿದರು. ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.