ADVERTISEMENT

ಕಡಿಮೆ ವೆಚ್ಚ: ಅಧಿಕ ಆದಾಯ ತಂದ ಕ್ಯಾಬೇಜ್‌

ಅರಸೀಕೆರೆ: ನಷ್ಟ ಸರಿದೂಗಿಸಿದ ಎಲೆಕೋಸು ಬೆಳೆ

ರಾಮಚಂದ್ರ ನಾಗತಿಕಟ್ಟೆ
Published 8 ಸೆಪ್ಟೆಂಬರ್ 2023, 4:59 IST
Last Updated 8 ಸೆಪ್ಟೆಂಬರ್ 2023, 4:59 IST
ಅರಸೀಕೆರೆ ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಮೇಘರಾಜಪ್ಪ ಅವರ ಹೊಲದಲ್ಲಿ ಎಲೆ ಕೋಸು ಕೊಯ್ಲು ಮಾಡಿರುವುದು.
ಅರಸೀಕೆರೆ ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಮೇಘರಾಜಪ್ಪ ಅವರ ಹೊಲದಲ್ಲಿ ಎಲೆ ಕೋಸು ಕೊಯ್ಲು ಮಾಡಿರುವುದು.   

ಅರಸೀಕೆರೆ: ಕಳೆದ ವರ್ಷ ಎಲೆಕೋಸು (ಕ್ಯಾಬೇಜ್‌) ಬೆಳೆದು ನಷ್ಟ ಅನುಭವಿಸಿದ್ದ ರೈತ ಪುನಃ ಈಗ ಅದನ್ನೇ ಬೆಳೆದು ಭರಪೂರ ಆದಾಯಗಳಿಸಿದ್ದಾರೆ.

ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಮೇಘರಾಜಪ್ಪ ಅವರು ತಮ್ಮ ಎರಡು ಎಕರೆಯಲ್ಲಿ ಸುತ್ತಲೂ ತೆಂಗು ಹಾಕಿದ್ದಾರೆ. ಈ ಪೈಕಿ ಉಳಿದ ಭೂಮಿಯಲ್ಲಿ ಎಲೆಕೋಸು (ಕ್ಯಾಬೇಜ್‌) ಬೆಳೆದು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ.

ತೇವಾಂಶ ಕೊರತೆಯ ನಡುವೆಯೂ 30 ಟನ್‌ಗೂ ಹೆಚ್ಚು ಎಲೆಕೋಸು ಇಳುವರಿ ಬಂದಿದೆ. ಮೊದಲ ಹಂತದ 20 ಟನ್ ಕಟಾವಿಗೆ ಪ್ರತಿ ಕೆ.ಜಿ.ಗೆ ₹ 16 ದೊರಕಿದೆ. ಎರಡನೇ ಹಂತದ ಕಟಾವಿಗೆ ₹ 17 ದೊರಕಿದೆ. ಒಟ್ಟು 30 ಟನ್‌ಗೆ ₹ 4,90,000 ಆದಾಯ ದೊರಕಿದೆ.

ರೈತ ಮೇಘರಾಜಪ್ಪ ಕ್ಯಾಬೇಜ್ ಬೆಳೆಯಲು ಬೀಜ, ಗೊಬ್ಬರ, ಔಷಧ ಸೇರಿ ಒಟ್ಟು ₹ 50 ಸಾವಿರ ಖರ್ಚು ಮಾಡಿದ್ದಾರೆ. ಬೆಳೆದ ಬೆಳೆಯನ್ನು ದೂರದ ಕೊಲ್ಕೊತ್ತಾ, ಚೆನ್ನೈ, ಹೈದರಾಬಾದ್, ಕಲ್ಲಿಕೋಟೆ ಹಾಗೂ ಉತ್ತರ ಭಾರತದ ಪ್ರಮುಖ ನಗರಗಳ ವ್ಯಾಪಾರಿಗಳು ಇಲ್ಲಿಯೇ ಖರೀದಿಸಿ ಕೊಂಡೊಯ್ಯುವುದರಿಂದ ಸಾಗಣೆ ವೆಚ್ಚ ಉಳಿಯುತ್ತಿದೆ.

‘ಕಳೆದ ವರ್ಷ ಎಲೆಕೋಸು ಬೆಲೆ ಕೆ.ಜಿಗೆ ₹ 1.5  ಕನಿಷ್ಠ ಬೆಲೆಗೆ ತಲುಪಿತ್ತು. ಕಟಾವು ಮಾಡುವ ಕೂಲಿಗೂ ಸಾಲುತ್ತಿರಲಿಲ್ಲ. ಬೀಜ, ಗೊಬ್ಬರದ ಖರ್ಚು ಬರುವುದು ಕನಸಿನ ಮಾತಾಗಿತ್ತು. ಆದ್ದರಿಂದ ಹೊಲದಲ್ಲಿಯೇ ಬೆಳೆಯನ್ನು ನಾಶ ಪಡಿಸಿದೆ.

‘ಸದ್ಯ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಇದರಿಂದ ಬೆಳೆದ ಎಲೆಕೋಸಿಗೂ ದರ ಬಂದಿದೆ. ಲಾಭ ನಷ್ಟದ ಲೆಕ್ಕ ಹಾಕದೇ, ಬೆಳೆ ಬೆಳೆದರೆ ಭೂ ತಾಯಿ ಕೈ ಹಿಡಿಯುತ್ತಾಳೆ. ಲಾಭವೂ ಕೈ ಸೇರುತ್ತದೆ’ ಎನ್ನುತ್ತಾರೆ ರೈತ ಮೇಘರಾಜಪ್ಪ.


ಅರಸೀಕೆರೆ ಹೋಬಳಿಯ ಜಂಗಮ ತುಂಬಿಗೆರೆ ಗ್ರಾಮದ ಮೇಘರಾಜಪ್ಪ ಅವರ ಹೊಲದಲ್ಲಿ ಎಲೆ ಕೋಸು ಕೊಯ್ಲು ಮಾಡುತ್ತಿರುವ ಕಾರ್ಮಿಕರು.

ತಡ ಮುಂಗಾರು ಪ್ರವೇಶದಿಂದಾಗಿ ಎಲೆಕೋಸು ನಿರೀಕ್ಷಿತ ಪ್ರಮಾಣದ ಬಿತ್ತನೆ ಆಗಿಲ್ಲ. ಸಹಜವಾಗಿ ರೈತರಿಗೆ ಉತ್ತಮ ಬೆಲೆ ಲಭಿಸಿದೆ

–ಜಯಸಿಂಹ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

ADVERTISEMENT

ಎಲೆಕೋಸು ಉತ್ತಮ ಬೆಲೆ ಲಭಿಸಿದೆ. ಮಳೆ ವಿದ್ಯುತ್ ಸಮಸ್ಯೆಗಳಿಂದ ಇಳುವರಿ ಕುಂಠಿತಗೊಂಡಿದೆ

–ಮೇಘರಾಜಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.