ADVERTISEMENT

ಹೊಸ ಜಿಲ್ಲೆಗೆ ನಮ್ಮನ್ನೂ ಸೇರಿಸಿ: ಕೂಡ್ಲಿಗಿ, ಸಂಡೂರು ಜನರ ಆಗ್ರಹ

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಕೆ.ನರಸಿಂಹ ಮೂರ್ತಿ
Published 19 ನವೆಂಬರ್ 2020, 1:34 IST
Last Updated 19 ನವೆಂಬರ್ 2020, 1:34 IST
ಹೊಸಪೇಟೆಯ ಹಂಪಿಯ ಕಲ್ಲಿನ ರಥ
ಹೊಸಪೇಟೆಯ ಹಂಪಿಯ ಕಲ್ಲಿನ ರಥ   

ಬಳ್ಳಾರಿ: ಜಿಲ್ಲೆಯನ್ನು ವಿಭಜನೆ ಮಾಡುವ ಸರ್ಕಾರದ ನಿರ್ಧಾರಕ್ಕೆ ಒಂದೆಡೆ ಸ್ವಾಗತ ದೊರಕುತ್ತಿದೆ. ಮತ್ತೊಂದೆಡೆ ಈ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗೆ ಸಿದ್ಧತೆಗಳು ನಡೆದಿವೆ.

ಈ ನಡುವೆಯೇ, ಅಖಂಡ ಜಿಲ್ಲೆಯ ವಿವಿಧ ತಾಲ್ಲೂಕುಗಳ ಜನ ತಮ್ಮನ್ನು ಹೊಸ ಜಿಲ್ಲೆಗೆ ಸೇರ್ಪಡೆ ಮಾಡಬೇಕು ಎಂಬ ಆಗ್ರಹವನ್ನು ಮುಂದಿಡ ಲಾರಂಭಿಸಿದ್ದಾರೆ. ಹೊಸ ಜಿಲ್ಲೆಯತ್ತ ಆಸೆಗಣ್ಣಿನ ನೋಟಗಳು ಹರಿದಿವೆ. ವಾಟ್ಸ್‌ ಆಪ್‌, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಬಿಸಿ ಚರ್ಚೆಗಳೂ ನಡೆದಿವೆ.

ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಹೊಸಪೇಟೆಯ ಸುತ್ತಮುತ್ತಲಿನ ಪಶ್ಚಿಮ ತಾಲ್ಲೂಕುಗಳಿಗಿಂತಲೂ ಕೊಂಚ ದೂರದಲ್ಲಿರುವ ಕೂಡ್ಲಿಗಿ ಮತ್ತು ಸಂಡೂರಿನಿಂದ ಈ ಆಗ್ರಹ ಕೇಳಿಬರುತ್ತಿರುವುದು ವಿಶೇಷ.

ADVERTISEMENT

ಇವರೆಲ್ಲರೂ ಹೊಸ ಜಿಲ್ಲೆಯ ಸ್ಥಾಪನೆಯನ್ನು ಸ್ವಾಗತಿಸಿದ್ದಾರೆ. ಆದರೆ ತಮ್ಮನ್ನು ಸೇರ್ಪಡೆ ಮಾಡದಿದ್ದರೆ ಅರ್ಥವೇ ಇಲ್ಲ ಎಂಬ ಪ್ರತಿಪಾದನೆಯನ್ನೂ ಮಾಡಿದ್ದಾರೆ.

ವಿಜಯನಗರ ಜಿಲ್ಲೆ ಸ್ಥಾಪನೆಯಿಂದ ಪಶ್ಚಿಮ ತಾಲ್ಲೂಕುಗಳ ಅಭಿವೃದ್ಧಿಗೆ ದಾರಿಯಾಗುತ್ತದೆ ಎಂಬ ಆಶಾವಾದವನ್ನು ವ್ಯಕ್ತಪಡಿಸಿರುವ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಟಿ.ಬೊಮ್ಮಣ್ಣ, ಕೂಡ್ಲಿಗಿಯನ್ನು ಸೇರ್ಪಡೆ ಮಾಡದೇ ಇದ್ದರೆ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಅವರ ಪ್ರಕಾರ ಕೂಡ್ಲಿಗಿ ಬಳ್ಳಾರಿ ಜಿಲ್ಲೆಗಿಂತಲೂ ವಿಜಯನಗರ ಜಿಲ್ಲೆಗೇ ಸೇರಬೇಕು.

ಈ ಪ್ರತಿಪಾದನೆಗೆ ಸಂಡೂರು ಆಯಾಮವೂ ಉಂಟು. ಅಲ್ಲಿನ ಜನಸಂಗ್ರಾಮ ಪರಿಷತ್ತಿನ ಮುಖಂಡ ಶ್ರೀಶೈಲ ಆಲ್ದಳ್ಳಿ, ‘ಹೊಸಪೇಟೆಗೆ 28 ಕಿ.ಮೀ ಹತ್ತಿರವಿರುವ ಸಂಡೂರನ್ನು ಹೊಸ ಜಿಲ್ಲೆಗೆ ಸೇರಿಸದೇ ಹೋದರೆ ನೂತನ ಜಿಲ್ಲೆಯ ಘೋಷಣೆಯು ಅವೈಜ್ಞಾನಿಕ’ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿರುವ ಅವರು, ‘ಬಳ್ಳಾರಿಯಿಂದ ಸಂಡೂರಿಗೆ ಇರುವ ಅಂತರವನ್ನು ಹೋಲಿಸಿದರೆ ಹೊಸಪೇಟೆಯೇ ಹತ್ತಿರ. ಹೀಗಾಗಿ ಅದು ಜಿಲ್ಲಾ ಕೇಂದ್ರವಾದರೆ ಎಲ್ಲ ಕೆಲಸ ಕಾರ್ಯಗಳಿಗೂ ಅಲ್ಲಿಗೆ ಸಂಚರಿಸಲು ಅನುಕೂಲವಾಗುತ್ತದೆ’ ಎಂದರು.

ಹೋರಾಟ ಸಮಿತಿ ಚುರುಕು:ಬಳ್ಳಾರಿ ಜಿಲ್ಲೆ ವಿಭಜನೆಯನ್ನು ವಿರೋಧಿಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಚರ್ಚಿಸಲು, ಮಾಹಿತಿಯನ್ನು ಹಂಚಲು ರಚಿಸಲಾಗಿದ್ದ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಹೆಸರಿನ ವಾಟ್ಸ್‌ ಅಪ್‌ ಗುಂಪು ಮತ್ತೆ ಚುರುಕಾಗಿದೆ. ತುಂಗಭದ್ರಾ ರೈತ ಸಂಘದ ದರೂರು ಪುರುಷೋತ್ತಮಗೌಡ ರಚಿಸಿರುವ ಈ ಗುಂಪಿನಲ್ಲಿ ವಿಭಜನೆ ವಿರೋಧಿ ಚರ್ಚೆಗಳು ಶುರುವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.