ADVERTISEMENT

ಇಟ್ಟಿಗಿಯಲ್ಲಿ ಲಕ್ಷಾಂತರ ಮೌಲ್ಯದ ತಂತಿ ಕಳವು: ರೈತರಿಗೆ ಫಜೀತಿ

ಕಳ್ಳರ ಜಾಲದ ಶಂಕೆ; ವಿದ್ಯುತ್ ತಂತಿ, ಕೇಬಲ್ ಕಳ್ಳರ ಭೀತಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 7:37 IST
Last Updated 28 ಜನವರಿ 2026, 7:37 IST
ಹೂವಿನಹಡಗಲಿ ತಾಲ್ಲೂಕು ಅಡವಿಮಲ್ಲನಕೆರೆ ಗ್ರಾಮದ ರೈತರೊಬ್ಬರ ಪಂಪ್‌ಸೆಟ್‌ನ ಕೇಬಲ್ ಕತ್ತರಿಸಿರುವುದು
ಹೂವಿನಹಡಗಲಿ ತಾಲ್ಲೂಕು ಅಡವಿಮಲ್ಲನಕೆರೆ ಗ್ರಾಮದ ರೈತರೊಬ್ಬರ ಪಂಪ್‌ಸೆಟ್‌ನ ಕೇಬಲ್ ಕತ್ತರಿಸಿರುವುದು   

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿವೆ. ಮನೆ, ಜಾನುವಾರು, ಶಾಲೆಗಳಲ್ಲಿ ಬ್ಯಾಟರಿಗಳ ಸರಣಿ ಕಳ್ಳತನ ಹಾವಳಿಯ ನಡುವೆ ವಿದ್ಯುತ್ ಕಂಬಗಳಲ್ಲಿನ ತಂತಿ ಹಾಗೂ ಕೃಷಿ ಪಂಪ್ ಸೆಟ್ ಕೇಬಲ್‌ಗಳ ಕಳ್ಳತನ ಹೆಚ್ಚಾಗಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ತಾಲ್ಲೂಕಿನ ಅಡವಿಮಲ್ಲನಕೇರಿ, ತಳಕಲ್ಲು, ವರಕನಹಳ್ಳಿ, ಮಹಾಜನದಹಳ್ಳಿ, ಉತ್ತಂಗಿ, ಇಟ್ಟಿಗಿ ಸುತ್ತಮುತ್ತ ಗ್ರಾಮಗಳಲ್ಲಿ ರೈತರ ಪಂಪ್ ಸೆಟ್ ಕೇಬಲ್‌ಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ರಾತ್ರಿ ಹೊತ್ತು ಹಾಗೂ ರೈತರು ತೋಟಗಳಲ್ಲಿ ಇಲ್ಲದಿರುವ ಸಮಯ ನೋಡಿ ಕಳ್ಳರು ವಿದ್ಯುತ್ ಕೇಬಲ್ ಕದಿಯುತ್ತಿದ್ದಾರೆ.

‘ಅನೇಕ ಕಡೆಗಳಲ್ಲಿ ಈ ಕೃತ್ಯ ನಡೆದಿರುವುದರಿಂದ ಕೇಬಲ್ ಕಳ್ಳರ ಜಾಲ ಇರಬಹುದು’ ಎಂದು ರೈತರು ಸಂಶಯ ವ್ಯಕ್ತಪಡಿಸಿದ್ದಾರೆ.

ADVERTISEMENT

ವಿದ್ಯುತ್ ಲೋಡ್ ಶೆಡ್ಡಿಂಗ್, ನಾನಾ ಸಮಸ್ಯೆಗಳ ನಡುವೆ ನೀರಾವರಿ ಆಶ್ರಿತ ರೈತರು ಬೆಳೆ ಬೆಳೆಯಲು ಹರಸಾಹಸಪಡುತ್ತಿರುವ ಸಂದರ್ಭದಲ್ಲಿ ಕೇಬಲ್ ಕಳ್ಳರ ಕಾಟ ಹೆಚ್ಚಾಗಿರುವುದು ದೊಡ್ಡ ತಲೆನೋವು ತಂದಿದೆ. ಕಳುವಾದ ಕೇಬಲ್ ಮೌಲ್ಯ ಕಡಿಮೆ ಎಂಬ ಕಾರಣಕ್ಕೆ ರೈತರು ಪೊಲೀಸರಿಗೆ ದೂರು ನೀಡದೇ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ.

ಇಟ್ಟಿಗಿ ಗ್ರಾಮದ ಹೊರ ವಲಯ ಮೊರಾರ್ಜಿ ವಸತಿ ಶಾಲೆ ಹತ್ತಿರ ಬಳಿಗಾರ ಮಲ್ಲಿಕಾರ್ಜುನ ಅವರ ವಸತಿ ವಿನ್ಯಾಸದಲ್ಲಿ ಬೀದಿದೀಪ ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಅಂದಾಜು ₹ 3 ಲಕ್ಷ ಮೌಲ್ಯದ ಅಲ್ಯುಮಿನಿಯಂ ಕಂಡಕ್ಟರ್ ತಂತಿಯನ್ನು ಕಳ್ಳರು ಬಿಚ್ಚಿಕೊಂಡು ಹೋಗಿದ್ದಾರೆ.

ಮಾಗಳ-ಹಿರೇಹಡಗಲಿ, ಮಾಗಳ-ಕೆ.ಅಯ್ಯನಹಳ್ಳಿ, ಮಾಗಳ-ಅಲ್ಲಿಪುರ ಮಾರ್ಗಗಳಲ್ಲಿ ನಿಷ್ಕ್ರಿಯ ವಿದ್ಯುತ್ ಲೈನ್ ಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ದಾಸರಹಳ್ಳಿ ತಾಂಡ, ಹೊಳಗುಂದಿ, ರಾಜವಾಳ, ಬನ್ನಿಮಟ್ಟಿ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳಲ್ಲಿನ ಲಕ್ಷಾಂತರ ಮೌಲ್ಯದ ಅಲ್ಯಮಿನಿಯಂ ತಂತಿ ಕಳುವಾಗಿದೆ.

ಕೇಬಲ್ ಗಳನ್ನು ಸುಟ್ಟು ತಾಮ್ರದ ತಂತಿಯನ್ನು ತೆಗೆದು ಮಾರಾಟ ಮಾಡುವ ಹಾಗೂ ವಿದ್ಯುದೀಕರಣ ಕೆಲಸದಲ್ಲಿ ಪರಿಣಿತಿ ಇರುವವರು ಕೃತ್ಯ ಎಸಗುತ್ತಿರುವ ಬಗ್ಗೆ ರೈತರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಪಂಪ್ ಸೆಟ್ ಗಳ ಕೇಬಲ್ ಹಾಗೂ ವಿದ್ಯುತ್ ತಂತಿಯ ಕಳ್ಳತನದಿಂದ ಆರ್ಥಿಕ ನಷ್ಟ ಉಂಟಾಗುತ್ತಿದೆ. ಕೇಬಲ್ ಮರು ಜೋಡಣೆ ಮಾಡುವವರೆಗೆ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗುವುದಿಲ್ಲ. ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು’ ಎಂದು ಅಡವಿಮಲ್ಲನಕೇರಿ ಗ್ರಾಮದ ರೈತರಾದ ಬೆಣಕಲ್ ವೀರೇಶ, ಎಂ.ದೇವಪ್ಪ, ಎಸ್.ಕರಿಬಸಪ್ಪ ಆಗ್ರಹಿಸಿದ್ದಾರೆ.

ಇಟ್ಟಿಗಿ ಗ್ರಾಮದ ಹೊರ ವಲಯದಲ್ಲಿರುವ ವಸತಿ ಬಡಾವಣೆಯ ಕಂಬಗಳಿಗೆ ಅಳವಡಿಸಿದ್ದ ಅಲ್ಯುಮಿನಿಯಂ ವಿದ್ಯುತ್ ತಂತಿಯನ್ನು ಕಳ್ಳರು ಬಿಚ್ಚಿಕೊಂಡು ಹೋಗಿರುವುದು
ಕೇಬಲ್ ಕಳ್ಳತನದ ಬಗ್ಗೆ ಅಧಿಕೃತ ದೂರುಗಳು ದಾಖಲಾಗಿಲ್ಲ. ಈ ಬಗ್ಗೆ ನಿಗಾವಹಿಸಲು ಸಿಬ್ಬಂದಿಗೆ ಸೂಚಿಸುತ್ತೇವೆ.
– ದೀಪಕ್ ಭೂಸರೆಡ್ಡಿ, ಸಿಪಿಐ ಹೂವಿನಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.