ADVERTISEMENT

ಬಳ್ಳಾರಿ: ಮಸಣ ಕಾರ್ಮಿಕರ ಧರಣಿ 9ರಂದು

ಕಾರ್ಮಿಕರಿಲ್ಲ ಎಂದು ತಪ್ಪು ವರದಿ ನೀಡಿದ ಸ್ಥಳೀಯ ಸಂಸ್ಥೆಗಳು: ಆರೋಪ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 7:55 IST
Last Updated 3 ನವೆಂಬರ್ 2020, 7:55 IST

ಬಳ್ಳಾರಿ:‘ಜಿಲ್ಲೆಯಲ್ಲಿ ಮಸಣ ಕಾರ್ಮಿಕರಿಲ್ಲ ಎಂದು ಸ್ಥಳೀಯ ಸಂಸ್ಥೆಗಳು ತಪ್ಪು ವರದಿ ನೀಡಿರುವುದನ್ನು ಖಂಡಿಸಿ ನಗರದಜಿಲ್ಲಾ ಪಂಚಾಯಿತಿ ಮುಂಭಾಗ ನ.9ರಂದು ಧರಣಿ ನಡೆಸಲಾಗುವುದು’ ಎಂದು ಮಸಣ ಕಾರ್ಮಿಕರ ಸಂಘದ ರಾಜ್ಯ ಘಟಕದ ಸಂಚಾಲಕ ಯು.ಬಸವರಾಜ್‌ ತಿಳಿಸಿದರು.

‘ಸತತ ಹೋರಾಟದ ಪರಿಣಾಮವಾಗಿ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕಾರ್ಮಿಕರ ಗಣತಿ ಮಾಡಲು ನಿರ್ಧರಿಸಿದೆ. ಆದರೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಅಂಥ ಕಾರ್ಮಿಕರೇ ಇಲ್ಲ ಎಂದು ಸುಳ್ಳು ವರದಿ ನೀಡಿರುವುದು ಆಘಾತಕಾರಿಯಾಗಿದೆ.ಕಾರ್ಮಿಕರಿದ್ದಾರೆ ಎಂಬುದನ್ನು ತೋರಿಸುವ ಸಲುವಾಗಿಯೇ ಧರಣಿಯನ್ನು ಹಮ್ಮಿಕೊಳ್ಳಲಾಗುವುದು’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾರ್ವಜನಿಕ ಮಸಣಗಳ ನಿರ್ವಹಣೆಗೆ ಸ್ಥಳೀಯ ಸಂಸ್ಥೆಯು ನೇಮಕಾತಿ ಮಾಡಬೇಕು. ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸ ಮಾಡುವವರಿಗೆ ಕನಿಷ್ಠ ₨ 2.5 ಸಾವಿರ ಕೂಲಿ ಕೊಡಬೇಕು. ಮಸಣದಲ್ಲಿ ಕೆಲಸ ಮಾಡಲು ಅಗತ್ಯ ಸುರಕ್ಷತಾ ಪರಿಕರಗಳನ್ನು ನೀಡಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

‘ಮಸಣ ಕಾರ್ಮಿಕರನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪಟ್ಟಿಗೆ ಸೇರಿಸಿ ಕಾರ್ಮಿಕ ಕಲ್ಯಾಣ ಮಂಡಳಿಯ ಸೌಲಭ್ಯಗಳನ್ನು ನೀಡಬೇಕು. ಮಸಣಗಳ ಸಮೀಕ್ಷೆ ಮಾಡಬೇಕು. ಅವುಗಳ ಒತ್ತುವರಿ ತೆರವು ಮಾಡಬೇಕು. ಉದ್ಯೋಗಖಾತ್ರಿ ಯೋಜನೆಯ ಮೂಲಕ ಜನಸ್ನೇಹಿ ನಂದನವನವನ್ನಾಗಿಸಬೇಕು’ ಎಂದು ಒತ್ತಾಯಿಸಿದರು.

‘ಮಸಣ ಕಾರ್ಮಿಕರಿಗೆ ಉಚಿತ ಕೃಷಿಭೂಮಿ ಕೊಡಬೇಕು. ಅವರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕೆ ಮೀಸಲಾತಿ ಕಲ್ಪಿಸಬೇಕು. ಎಲ್ಲೆಡೆ ದಲಿತರಿಗೆ ಪ್ರತ್ಯೇಕ ಮಸಣಕ್ಕೆ ಜಾಗ ನೀಡಬೇಕು’ ಎಂದು ಸಂಘದ ಸಹ ಸಂಚಾಲಕಿ ಬಿ.ಮಾಳಮ್ಮ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.