ಬಳ್ಳಾರಿ: ಕೇಂದ್ರದ ಬಜೆಟ್ ಪ್ರತಿ ಸುಟ್ಟು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ರಾಜ್ಯ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಸಂಘದ ರಾಷ್ಟ್ರ ಘಟಕದ ಉಪಾಧ್ಯಕ್ಷ ಸುನೀತ್ ಕುಮಾರ್, ‘ಕೇಂದ್ರ ಬಜೆಟ್ ಜನ ವಿರೋಧಿ, ರೈತ ವಿರೋಧಿ ಮತ್ತು ಕಾರ್ಪೊರೆಟ್ ಪರವಾಗಿದೆ. ಈ ಬಜೆಟ್ ರೈತರ ಬದುಕಿನ ಬವಣೆಗಳಿಗೆ ಪರಿಹಾರ ನೀಡದೆ ಪೊಳ್ಳು ಆಶ್ವಾಸನೆಗಳಿಂದ ತುಂಬಿದೆ. ಕನಿಷ್ಟ ಬೆಂಬಲ ಬೆಲೆಯಡಿ ರೈತರ ಉತ್ಪನ್ನಗಳನ್ನು ಸರ್ಕಾರ ಖರೀದಿಸಬೇಕು, ಅದನ್ನು ಕಾನೂನುಬದ್ಧವಾಗಿಸಬೇಕು, ವಿದ್ಯುತ್ ಮಸೂದೆ-2023 ಅನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಸಂಘಟನೆ ಆಗ್ರಹಿಸುತ್ತದೆ‘ ಎಂದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಶಶಿಧರ್ ಮಾತನಾಡಿ, ‘ನರೆಗಾ ವ್ಯವಸ್ಥೆಯನ್ನು ಬಲಪಡಿಸಬೇಕು, ಸಾಲಮನ್ನಾ ಮಾಡಬೇಕು ಮತ್ತು ಪಿಂಚಣಿ ಕೊಡಬೇಕು ಎಂದು ಬಹಳ ಕಾಲದಿಂದ ಹೋರಾಟ ನಡೆಸಲಾಗುತ್ತಿದೆ. ಈ ಹಕ್ಕೊತ್ತಾಯಗಳಲ್ಲಿ ಯಾವುದನ್ನೂ ಈಡೇರಿಲ್ಲ’ ಎಂದರು.
ರಾಜ್ಯ ಕಾರ್ಯದರ್ಶಿ ಭಗವಾನ್ ರೆಡ್ಡಿ, ಉಪಾಧ್ಯಕ್ಷ ವಿ.ನಾಗಮಾಳ್, ಎನ್. ಸ್ವಾಮಿ, ಲಕ್ಷ್ಮಣ್, ಗಣಪತಿ ಮಾನೆ, ಮಹೇಶ್, ಗೋವಿಂದ್, ದೀಪಾ, ಶರಣು ಗೂಗಲ್, ಗುರಳ್ಳಿ ರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.