ADVERTISEMENT

ಬಳ್ಳಾರಿ ಶಾಸಕರೊಂದಿಗೆ ಸಿಎಂ ಸಭೆ; ಡಿಸಿ ಬದಲಾವಣೆ ಬಗ್ಗೆಯೂ ಮಾತುಕತೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 4:13 IST
Last Updated 31 ಜುಲೈ 2025, 4:13 IST
ಮುಖ್ಯಮಂತ್ರಿ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಬಳ್ಳಾರಿ ಜಿಲ್ಲೆಯ ಶಾಸಕರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌, ಶಾಸಕರಾದ ಬಿ. ನಾಗೇಂದ್ರ, ಜೆ.ಎನ್‌ ಗಣೇಶ್‌, ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ್‌, ಅನ್ನಪೂರ್ಣಾ ಭಾಗವಹಿಸಿದ್ದರು
ಮುಖ್ಯಮಂತ್ರಿ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಬಳ್ಳಾರಿ ಜಿಲ್ಲೆಯ ಶಾಸಕರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌, ಶಾಸಕರಾದ ಬಿ. ನಾಗೇಂದ್ರ, ಜೆ.ಎನ್‌ ಗಣೇಶ್‌, ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ್‌, ಅನ್ನಪೂರ್ಣಾ ಭಾಗವಹಿಸಿದ್ದರು   

ಬಳ್ಳಾರಿ: ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಮತ್ತು ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. 

ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರೂ ಇದ್ದ ಈ ಸಭೆಯಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ, ಕಂಪ್ಲಿ ಜೆ.ಎನ್‌ ಗಣೇಶ್‌, ಸಿರುಗುಪ್ಪದ ನಾಗರಾಜ್‌, ಸಂಡೂರಿನ ಅನ್ನಪೂರ್ಣ ಅವರು ಪಾಲ್ಗೊಂಡಿದ್ದರು. 

ಕಾಂಗ್ರೆಸ್‌ ಶಾಸಕರಿಗೆ ತಲಾ ₹50 ಕೋಟಿಯಂತೆ ₹5,050 ಕೋಟಿ ಅನುದಾನ ನೀಡುವುದಾಗಿ ಇತ್ತೀಚೆಗೆ ಹೇಳಲಾಗಿತ್ತು. ಅದರಂತೆ ಈ ಅನುದಾನಕ್ಕಾಗಿ ವಿವಿಧ ಪ್ರಸ್ತಾವಗಳನ್ನು ಶಾಸಕರು ಮುಖ್ಯಮಂತ್ರಿ ಎದುರು ಇರಿಸಿದರು ಎಂದು ಹೇಳಲಾಗಿದೆ. 

ADVERTISEMENT

ಇದರ ಜತೆಗೆ, ಬಳ್ಳಾರಿ ಏರ್‌ಪೋರ್ಟ್‌, ಒಣಮೆಣಸಿನಕಾಯಿ ಮಾರುಕಟ್ಟೆ, ಜೀನ್ಸ್‌ ಪಾರ್ಕ್‌ ಕುರಿತೂ ಚರ್ಚೆ ನಡೆಯಿತು ಎಂದು ಗೊತ್ತಾಗಿದೆ. 

ಬಳ್ಳಾರಿ ಜಿಲ್ಲಾಧಿಕಾರಿ ಬದಲಾವಣೆ ವಿಷಯವಾಗಿಯೂ ಮಾತುಕತೆಗಳು ನಡೆಯಿತು ಎಂದು ಹೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಎಲ್ಲರೂ ಒಮ್ಮತಕ್ಕೆ ಬಂದರೆ ಸೂಕ್ತ ಬದಲಾವಣೆ ಮಾಡುವುದಾಗಿ ಸಿಎಂ ತಿಳಿಸಿದರು ಎಂದು ಗೊತ್ತಾಗಿದೆ. 

ಇನ್ನು ಸಭೆಯಲ್ಲಿ ನಡೆದ ಚರ್ಚೆಯ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಡೂರು ಶಾಸಕಿ ಅನ್ನಪೂರ್ಣಾ, ’ಕುಡುತಿನಿ ಭೂಸಂತ್ರಸ್ತ ಹೋರಾಟಗಾರರ ವಿಚಾರವಾಗಿ ಒಂದು ನಿರ್ಧಾರಕ್ಕೆ ಬರುತವಂತೆಯೂ, ಶಿಕ್ಷಕರ ಕೊರತೆ ನೀಗಿಸುವುಂತೆಯೂ, ತಾಲ್ಲೂಕಿನಲ್ಲಿ ಬಿ ಖರಾಬು ಜಮೀನು  ಸಮಸ್ಯೆ ನಿವಾರಿಸುವಂತೆಯೂ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು. 

ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಮಾತನಾಡಿ, ‘ ಕಂಪ್ಲಿ–ಗಂಗಾವತಿ ಸಂಪರ್ಕ ಕಲ್ಪಿಸುವ ಸೇತುವೆ ಸಮಸ್ಯೆ ಪರಿಹಾರ ಕಲ್ಪಿಸುವಂತೆ, ತಾಲೂಕಿನ ರಸ್ತೆ ಅಭಿವೃದ್ಧಿ ಮತ್ತು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುವಂತೆ ಕೋರಿಕೆ ಸಲ್ಲಿಸಲಾಗಿದೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ’ ಎಂದು ತಿಳಿಸಿದರು.  

ಶಾಸಕ ನಾರಾ ಭರತ್‌ ರೆಡ್ಡಿ ಸಭೆಗೆ ಗೈರಾಗಿದ್ದರು. ಆದರೆ, ಅವರು ಎರಡು ದಿನಗಳಿಗೆ ಮೊದಲೇ ಸಿಎಂ ಭೇಟಿಯಾಗಿದ್ದು, ₹50 ಕೋಟಿ ಅನುದಾನದ ಜೊತೆಗೆ ಹೆಚ್ಚುವರಿ ₹30 ಕೋಟಿಗೆ ಬೇಡಿಕೆ ಸಲ್ಲಿಸಿದ್ದರು ಎನ್ನಲಾಗಿದೆ. 

ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜು ತಮ್ಮ ಕ್ಷೇತ್ರದ ರಸ್ತೆ ಮತ್ತು ಹೆದ್ದಾರಿಗಳ ಸಮಸ್ಯೆಗಳನ್ನು ಪ್ರಸ್ತಾಪ ಮಾಡಿರುವುದಾಗಿ ಹೇಳಿದರು. 

ಇನ್ನುಳಿದಂತೆ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಸಂಪರ್ಕ ಸಾಧ್ಯವಾಗಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.