ADVERTISEMENT

‘25ಕ್ಕೆ ಕಮಲಾಪುರದಲ್ಲಿ ಸಿ.ಎಂ. ಪ್ರಚಾರ’

ಬಿಜೆಪಿ ಗೆದ್ದರೆ ವಾಲ್ಮೀಕಿ ನಾಯಕರಿಗೆ ಅನುಕೂಲ–ರಾಜುಗೌಡ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 13:45 IST
Last Updated 22 ನವೆಂಬರ್ 2019, 13:45 IST
ಶಾಸಕ ರಾಜುಗೌಡ ಅವರು ಶುಕ್ರವಾರ ಸಂಜೆ ಹೊಸಪೇಟೆಯ ಬಾಣದಕೇರಿಯಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡರು
ಶಾಸಕ ರಾಜುಗೌಡ ಅವರು ಶುಕ್ರವಾರ ಸಂಜೆ ಹೊಸಪೇಟೆಯ ಬಾಣದಕೇರಿಯಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡರು   

ಹೊಸಪೇಟೆ: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ನ. 25ರಂದು ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಪರ ತಾಲ್ಲೂಕಿನ ಕಮಲಾಪುರದಲ್ಲಿ ಹಮ್ಮಿಕೊಂಡಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡುವರು’ ಎಂದು ಶಾಸಕ ರಾಜುಗೌಡ ನಾಯಕ ತಿಳಿಸಿದರು.

ಶುಕ್ರವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10ಗಂಟಗೆ ವಿಜಯನಗರ ಕ್ಷೇತ್ರದ ಗ್ರಾಮೀಣ ಭಾಗದ ಪ್ರಚಾರ ಸಭೆ ಆಯೋಜಿಸಲಾಗಿದೆ. ಕ್ಷೇತ್ರ ವ್ಯಾಪ್ತಿಯ ನೂರಾರು ಕಾರ್ಯಕರ್ತರು ಅದರಲ್ಲಿ ಪಾಲ್ಗೊಳ್ಳುವರು. ಡಿ. 2ರಂದು ನಗರದಲ್ಲಿ ಮತ್ತೊಂದು ಬಹಿರಂಗ ಸಭೆ ಹಮ್ಮಿಕೊಂಡಿದ್ದು, ಅದರಲ್ಲೂ ಸಿ.ಎಂ. ಭಾಗವಹಿಸಿ ಮಾತನಾಡುವರು’ ಎಂದು ವಿವರಿಸಿದರು.

‘ರಾಜ್ಯದಲ್ಲಿ ಸರ್ಕಾರ ಸ್ಥಿರವಾಗಿ ಇರಬೇಕಾದರೆ ಜನ ಆನಂದ್‌ ಸಿಂಗ್‌ ಅವರನ್ನು ಗೆಲ್ಲಿಸಬೇಕು. ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಕಾಲ್ಗುಣದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರು ರಾಜೀನಾಮೆ ನೀಡಿದ ನಂತರ 16 ಜನ ಶಾಸಕರು ಅವರ ಹಾದಿ ತುಳಿದರು’ ಎಂದರು.

ADVERTISEMENT

‘ಗವಿಯಪ್ಪನವರು ಕಾರಣಾಂತರದಿಂದ ಪ್ರಚಾರಕ್ಕೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಅವರೂ ಬರುವರು. ಆದರೆ, ಅವರ ಬೆಂಬಲಿಗರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಂಗ್‌ ಗೆದ್ದರೆ ಸರ್ಕಾರದಲ್ಲಿ ಸಚಿವರಾಗುತ್ತಾರೆ. ವಿಜಯನಗರ ಜಿಲ್ಲೆ ಆಗುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸಣ್ಣ ಜಿಲ್ಲೆಗಳಾದರೆ ಜನರಿಗೆ ಅನುಕೂಲವಾಗುತ್ತದೆ. ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಸಂಜೆ ನಗರದ ಉಕ್ಕಡಕೇರಿ, ಚಿತ್ರಕೇರಿ, ಬಾಣದಕೇರಿಯಲ್ಲಿ ಸಂಚರಿಸಿ ಮತಯಾಚಿಸಿದರು. ಬಾಣದಕೇರಿಯಲ್ಲಿ ಮಾತನಾಡಿ, ‘ಬಿಜೆಪಿ ಸರ್ಕಾರ ಇದ್ದಾಗಲೆಲ್ಲ ವಾಲ್ಮೀಕಿ ನಾಯಕರಿಗೆ ಬಹಳಷ್ಟು ಅನುಕೂಲಗಳಾಗಿವೆ. ಸರ್ಕಾರ ಸ್ಥಿರವಾಗಿ ಇದ್ದರೆ ಸಮಾಜದ ಎಲ್ಲಾ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು. ಅದಕ್ಕಾಗಿ ನಾನು, ಶ್ರೀರಾಮುಲು ಸೇರಿದಂತೆ ಸಮಾಜದ ಇತರೆ ಶಾಸಕರು ಶ್ರಮಿಸುತ್ತೇವೆ’ ಎಂದು ಭರವಸೆ ನೀಡಿದರು.

ಮುಖಂಡರಾದ ಗುದ್ಲಿ ಪರಶುರಾಮ, ಶಶಿಧರ್‌ ಸ್ವಾಮಿ, ಗೋಸಲ ಭರಮಪ್ಪ, ಗುಜ್ಜಲ್‌ ನಿಂಗಪ್ಪ, ಕಣ್ಣಿ ಶ್ರೀಕಂಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.