ADVERTISEMENT

ಉನ್ನತ ಶಿಕ್ಷಣದಲ್ಲಿ ಭ್ರಷ್ಟಾಚಾರಕ್ಕೆ ಕಳವಳ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2018, 13:54 IST
Last Updated 29 ಅಕ್ಟೋಬರ್ 2018, 13:54 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಎಂ. ಚಂದ್ರ ಪೂಜಾರಿ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಧ್ಯಾಪಕ ಎಂ. ಚಂದ್ರ ಪೂಜಾರಿ ಮಾತನಾಡಿದರು   

ಹೊಸಪೇಟೆ: ಇದೇ 31ರಂದು ಕೆಲಸದಿಂದ ನಿವೃತ್ತಿ ಹೊಂದಲಿರುವ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಎಂ. ಚಂದ್ರ ಪೂಜಾರಿ ಅವರ ಅಭಿನಂದನ ಸಮಾರಂಭ ಸೋಮವಾರ ವಿ.ವಿ.ಯಲ್ಲಿ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪೂಜಾರಿ, ‘ನನ್ನ ವೃತ್ತಿ ಜೀವನ ಬಹಳ ಖುಷಿ ಕೊಟ್ಟಿದೆ. ವಹಿಸಿದ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದ ಸಾರ್ಥಕತೆ ಇದೆ. ಇತ್ತೀಚಿನ ದಿನಗಳಲ್ಲಿ ಪ್ರಾಧ್ಯಾಪಕರು ಕೇವಲ ಪಠ್ಯಕ್ಕೆ ಸೀಮಿತರಾಗಿ ಬೋಧನೆ ಮಾಡುತ್ತಿದ್ದಾರೆ. ಅದು ಬದಲಾಗಬೇಕು. ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ಯುವ ಸಂಶೋಧಕರಿಗೆ ಮಾರ್ಗದರ್ಶನ ಮಾಡಬೇಕು. ಆ ಕೆಲಸವಾಗದ ಕಾರಣ ಗುಣಮಟ್ಟದ ಸಂಶೋಧನೆ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅದರಲ್ಲಿ ಶೇ 40ರಷ್ಟು ಪಾಲು ಪ್ರಾಧ್ಯಾಪಕ ವರ್ಗಕ್ಕೆ ಸೇರಿರುತ್ತದೆ. ಇದು ಬದಲಾಗಬೇಕು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥ ಎಚ್.ಡಿ. ಪ್ರಶಾಂತ್‌, ‘ಚಂದ್ರ ಪೂಜಾರಿ ಎಂದರೆ ಒಳ್ಳೆಯ ಕೆಲಸಗಾರ, ಪ್ರಾಮಾಣಿಕ, ನೇರ ನಿಷ್ಠುರತನಕ್ಕೆ ಹೆಸರಾದವರು. ಅವರನ್ನು ಸೂಕ್ಷ್ಮವಾಗಿ ನೋಡಿದರಷ್ಟೇ ಅರಿತುಕೊಳ್ಳಲು ಸಾಧ್ಯ’ ಎಂದು ಹೇಳಿದರು.

ಪ್ರಾಧ್ಯಾಪಕರಾದ ಜನಾರ್ದನ, ವೆಂಕಟಗಿರಿ ದಳವಾಯಿ, ರಮೇಶ ನಾಯಕ್, ಗೋವರ್ಧನ, ಕೆ. ಗೀತಮ್ಮ, ಎರ್ರಿಸ್ವಾಮಿ, ಹೊನ್ನೂರ್‌ ಅಲಿ, ಲೋಕೇಶ್‌ ಇದ್ದರು.

‘ಕಾವ್ಯವಲ್ಲ; ಪರಂಪರೆ’:‘ಮಲೆ ಮಹದೇಶ್ವರ ಕಾವ್ಯವು ಬಹುಪಠ್ಯಗಳ ಸಂಗ್ರಹದ ಜೊತೆಗೆ ಒಂದು ಪರಂಪರೆ ಕೂಡ ಆಗಿದೆ’ ಎಂದು ಸಮಾಜ ವಿಜ್ಞಾನ ನಿಕಾಯದ ಡೀನ್‌ ಪ್ರೊ. ಸ.ಚಿ. ರಮೇಶ ಹೇಳಿದರು.

ವಿ.ವಿ. ಜಾನಪದ ಅಧ್ಯಯನ ವಿಭಾಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದೇಸಿ–10 ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಯಾ ಕಾಲಘಟ್ಟದ ಮೌಲ್ಯಗಳನ್ನು ಕಾವ್ಯಗಳಲ್ಲಿ ಕಟ್ಟಿಕೊಡುವ ರೂಢಿ ಇದೆ. ಒಂದು ಕಾಲದ ಮೌಲ್ಯ, ಇನ್ನೊಂದು ಕಾಲದಲ್ಲಿ ಅಪಮೌಲ್ಯವಾಗಬಹುದು. ಬೇಟೆ ಸಂಪ್ರದಾಯ, ಹೆಣ್ಣು–ಗಂಡಿನ ಭೇದ, ಕಾಡು ನಾಶ ಇತ್ಯಾದಿ ಗಮನಿಸಬಹುದು’ ಎಂದರು.

ಎಸ್‌. ರಾಜೇಶ, ಎಂ. ನಾಗರಾಜ, ಕುಮಾರ ಯಲಿಬಳ್ಳಿ, ನಸ್ರತ್‌ ಜಬೀನಾ, ಸುನಂದಾ ಮೂಲಿಮನಿ, ರಾಮಚಂದ್ರ ಲಕ್ಕಳ್ಳಿ, ತಿಪ್ಪೇಸ್ವಾಮಿ, ಅಭಿಲಾಷ, ಕುಮಾರ, ಲಕ್ಷ್ಮೀಕಾಂತ, ಸಚ್ಚೀಂದ್ರನಾಗ್‌, ಆನಂದಕುಮಾರ, ಸತೀಶ, ಮಹಾಂತೇಶ, ಬಿಳೇನಿಸಿದ್ದ, ರಾಧಾಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.