ADVERTISEMENT

ಸಂವಿಧಾನ ರಕ್ಷಣೆಗೆ ಪ್ರತಿಜ್ಞೆ ಸ್ವೀಕಾರ

ಡಾ.ಬಿ.ಆರ್‌. ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ; ಬಾಬ್ರಿ ಮಸೀದಿ ಧ್ವಂಸಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 12:08 IST
Last Updated 6 ಡಿಸೆಂಬರ್ 2018, 12:08 IST
ಮಹಾಪರಿನಿರ್ವಾಣ ದಿನದ ಅಂಗವಾಗಿ ಕಾಂಗ್ರೆಸ್‌ ಪಕ್ಷದ ಮುಖಂಡರು ಗುರುವಾರ ಹೊಸಪೇಟೆಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸಮಾವೇಶಗೊಂಡು ಗೌರವ ಸಲ್ಲಿಸಿದರು
ಮಹಾಪರಿನಿರ್ವಾಣ ದಿನದ ಅಂಗವಾಗಿ ಕಾಂಗ್ರೆಸ್‌ ಪಕ್ಷದ ಮುಖಂಡರು ಗುರುವಾರ ಹೊಸಪೇಟೆಯ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸಮಾವೇಶಗೊಂಡು ಗೌರವ ಸಲ್ಲಿಸಿದರು   

ಹೊಸಪೇಟೆ: ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಮಹಾಪರಿನಿರ್ವಾಣ ದಿನ ಹಾಗೂ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಕ್ರಮ ಖಂಡಿಸಿ ಗುರುವಾರ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನಾ ರ್‍ಯಾಲಿ ನಡೆಸಿದವು.

ದಲಿತ ಹಕ್ಕುಗಳ ಸಮಿತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಜಲೀಸ್‌–ಇ–ಟಿಪ್ಪು ಸುಲ್ತಾನ್‌ ಸಂಘಟನೆಗಳು ಜಂಟಿಯಾಗಿ ರ್‍ಯಾಲಿ ಮಾಡಿದವು. ನಗರದ ಶ್ರಮಿಕ ಭವನದಿಂದ ಪ್ರಮುಖ ಮಾರ್ಗಗಳ ಮೂಲಕ ತಾಲ್ಲೂಕು ಕಚೇರಿವರೆಗೆ ಸಂಘಟನೆಗಳ ಕಾರ್ಯಕರ್ತರು ರ್‍ಯಾಲಿ ನಡೆಸಿದರು.

‘ಸಂವಿಧಾನ ಮತ್ತು ಜಾತ್ಯತೀತ’ ತತ್ವಗಳನ್ನು ಸಂರಕ್ಷಿಸಬೇಕು, ಬಾಬ್ರಿ ಮಸೀದಿ ಧ್ವಂಸಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್‌ ಕಚೇರಿ ಎದುರು ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ADVERTISEMENT

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಎಂ. ಜಂಬಯ್ಯ ನಾಯಕ ಮಾತನಾಡಿ, ‘ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಅದರ ರಕ್ಷಣೆ ಆಗಬೇಕಿದೆ. ಜತೆಗೆ ಜಾತ್ಯತೀತ ರಾಷ್ಟ್ರದ ಪರಿಕಲ್ಪನೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಎಲ್ಲ ಪ್ರಜ್ಞಾವಂತರು ಕೋಮುವಾದಿಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸಬೇಕು’ ಎಂದು ಹೇಳಿದರು.

ಸಮಿತಿ ಮುಖಂಡರಾದ ಕರುಣಾನಿಧಿ, ನಾಗರತ್ನಮ್ಮ, ಸತ್ಯಮೂರ್ತಿ, ಎಂ. ಗೋಪಾಲ, ಬಿಸಾಟಿ ಮಹೇಶ್‌, ಯಲ್ಲಾಲಿಂಗ, ಶಿವು, ಯಲ್ಲಮ್ಮ, ಟಿಪ್ಪು ಸುಲ್ತಾನ್‌ ಸಂಘಟನೆಯ ಇರ್ಫಾನ್‌, ನಾಸೀರ್‌, ಮೊಯಿನ್‌, ರಫೀಕ್‌ ಇದ್ದರು.

ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ: ಎರಡೂ ಸಂಘಟನೆಗಳ ಸಹಭಾಗಿತ್ವದಲ್ಲಿ 63ನೇ ಮಹಾ ಪರಿನಿರ್ವಾಣ ದಿನವನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಆಚರಿಸಲಾಯಿತು.

ಸಂಘದ ಅಧ್ಯಕ್ಷ ಎಂ.ಸಿ. ವೀರಸ್ವಾಮಿ ಮಾತನಾಡಿ, ‘ಅಂಬೇಡ್ಕರ್‌ ಅವರು ಸರ್ವರ ಕಲ್ಯಾಣಕ್ಕಾಗಿ ರಚಿಸಿದ ಸಂವಿಧಾನ ಇಡೀ ವಿಶ್ವದಲ್ಲಿಯೇ ಶ್ರೇಷ್ಠವಾದುದು. ಅಂತಹ ಸಂವಿಧಾನವನ್ನು ಉಳಿಸಿಕೊಂಡರೆ ಅವರಿಗೆ ಸಲ್ಲಿಸುವ ಬಹುದೊಡ್ಡ ಗೌರವ’ ಎಂದು ಹೇಳಿದರು.

ಸಂಘದ ಪ್ರಮುಖರಾದ ಜಿ. ತಿಪ್ಪಣ್ಣ, ದೇವದಾಸ್‌, ಎಚ್‌. ಹುಲುಗಣ್ಣ, ಬಿ. ಮಾರೆಣ್ಣ, ಶಿವಪ್ಪ, ಪಾಂಡುರಂಗಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ರಫೀಕ್‌, ಮುಖಂಡರಾದ ಎಲ್‌. ಸಿದ್ದನಗೌಡ, ಸಂದೀಪ್‌ ಸಿಂಗ್‌, ಗುಜ್ಜಲ್‌ ನಾಗರಾಜ, ಎಚ್‌.ಎಲ್‌. ಕೊಟ್ರೇಶ್‌, ಬೋಡರಾಮಪ್ಪ, ನಿಂಬಗಲ್‌ ರಾಮಕೃಷ್ಣ, ಶೇಕ್ಷಾವಲಿ, ಪಾಂಡು, ವಿಜಯಕುಮಾರ, ಶಂಕರ್‌, ಗೀತಾ, ಜಿ. ಪಂಪಾಪತಿ, ಸೋಮಶೇಖರ್‌, ಮೇಸ್ತ್ರಿ ಓಬಳೇಶ್‌, ಎಚ್‌. ಹುಲುಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.