ವಿನಯಕುಮಾರ್ ಸೊರಕೆ
ಬಳ್ಳಾರಿ: ‘ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಪಕ್ಷ ಸಂಘಟಿಸಲು ಸ್ಥಳೀಯ ಮುಖಂಡರು ಅವಿರತ ಶ್ರಮ ಹಾಕಬೇಕು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಪ್ರತಿಪಕ್ಷ ನಾಯಕರು ಅಪಪ್ರಚಾರ ಮಾಡುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಟೀಕಿಸಿದರು.
‘ಎಐಸಿಸಿಯು ಜಿಲ್ಲಾ, ತಾಲ್ಲೂಕು, ಬೂತ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರಚಾರ ಸಮಿತಿ ರಚಿಸಲು ಸೂಚಿಸಿದೆ. ಅದಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಸರ್ಕಾರದ ಯೋಜನೆಗಳು ಹಾಗೂ ಅಭಿವೃದ್ಧಿಯ ಕೆಲಸಗಳನ್ನು ಗ್ರಾಮದ ಪ್ರತಿಯೊಬ್ಬ ಜನರಿಗೆ ತಲುಪಿಸುವುದೇ ಪ್ರಚಾರ ಸಮಿತಿ ರಚನೆಯ ಉದ್ದೇಶ. ಜಿಲ್ಲಾ ಪ್ರಚಾರ ಸಮಿತಿಯಲ್ಲಿ 23 ಸದಸ್ಯರನ್ನು ಆಯ್ಕೆ ಮಾಡಿ, ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗುವುದು. ಸಮಿತಿ ರಚನೆಯ ಕಾರ್ಯ ಪೂರ್ಣಗೊಂಡ ಬಳಿಕ ಜಿಲ್ಲಾಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
‘ಡಿಸೆಂಬರ್‌ನಲ್ಲಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿವೆ. ನಮ್ಮ ಸರ್ಕಾರ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರ ಮಾಡಬೇಕು. ನಾವು ಶೇ 95ರಷ್ಟು ಕೆಲಸ ಮಾಡಿ, ಶೇ 5ರಷ್ಟು ಮಾತ್ರ ಪ್ರಚಾರ ನೀಡುತ್ತಿದ್ದೇವೆ. ಆದರೆ, ವಿರೋಧ ಪಕ್ಷದವರು ಶೇ 5ರಷ್ಟು ಕೆಲಸ ಮಾಡಿ, ಶೇ.95 ರಷ್ಟು ಪ್ರಚಾರ ಪಡೆಯುತ್ತಿದ್ದಾರೆ. ಮತಗಳವು ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ’ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಜಗನ್ನಾಥ, ಎಲ್.ಮಾರೆಣ್ಣ, ಮಂಜುನಾಥ್, ಆನಂದ ಕುಮಾರ, ವಿಷ್ಣು, ವೆಂಕಟೇಶ ಹೆಗಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.