ADVERTISEMENT

ಅಂಬೇಡ್ಕರ್‌ಗೆ ಕಾಂಗ್ರೆಸ್‌ನಿಂದ ಅವಮಾನ, ಹಿಂಸೆ: ವೈ. ಯಮುನೇಶ್‌

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 13:02 IST
Last Updated 22 ಏಪ್ರಿಲ್ 2019, 13:02 IST

ಹೊಸಪೇಟೆ: ‘ಇತಿಹಾಸ ಗೊತ್ತಿಲ್ಲದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕಾ ಎಂದು ಶಾಸಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷವು ಡಾ.ಬಿ.ಆರ್‌. ಅಂಬೇಡ್ಕರ್‌ ಅವರಿಗೆ ಮಾಡಿರುವ ಹಿಂಸೆ, ಅವಮಾನ ಬೇರೆ ಯಾರು ಮಾಡಿಲ್ಲ. ಅದನ್ನು ಸ್ವತಃ ಅಂಬೇಡ್ಕರ್‌ ಅವರೇ ಹೇಳಿಕೊಂಡಿದ್ದಾರೆ. ಅದನ್ನು ಸಿದ್ದರಾಮಯ್ಯನವರು ಮರೆತು ಬಿಟ್ಟಿದ್ದಾರೆಯೇ’ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಉಪಾಧ್ಯಕ್ಷ ವೈ. ಯಮುನೇಶ್‌ ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್ ಉರಿಯುವ ಮನೆ. ದಲಿತರು ಎಂದೂ ಆ ಮನೆಯ ಹತ್ತಿರ ಹೋಗಬೇಡಿ’ ಎಂದು ಅಂಬೇಡ್ಕರ್‌ ಅವರು ದಲಿತರಿಗೆ ಕರೆ ಕೊಟ್ಟಿದ್ದರು. ಅಂತಹ ಕಾಂಗ್ರೆಸ್‌ ಈಗ ಅಂಬೇಡ್ಕರ್‌ ಅವರ ಬಗ್ಗೆ ಎಲ್ಲಿಲ್ಲದ ಕಾಳಜಿ ತೋರಿಸುತ್ತಿರುವುದು ಹಾಸ್ಯಾಸ್ಪದ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಇನ್ನು ಮೋದಿಯವರಿಗೆ ಇತಿಹಾಸ ಗೊತ್ತಿಲ್ಲವೆಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಮೋದಿಯವರಿಗೆ ಇತಿಹಾಸದ ಅರಿವು ಇದ್ದ ಕಾರಣಕ್ಕಾಗಿಯೇ ಅಂಬೇಡ್ಕರ್‌ ಅವರು ಹುಟ್ಟಿ ಬೆಳೆದ, ಅಧ್ಯಯನ ಮಾಡಿದ, ಸಮಾಧಿ ಸ್ಥಳ ಸೇರಿದಂತೆ ಐದು ಸ್ಥಳಗಳನ್ನು ಪಂಚತೀರ್ಥಗಳೆಂದು ಗುರುತಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿದ್ದಾರೆ. ಸಂವಿಧಾನದ ಚಿರಸ್ಮರಣೆಗೆ ನ. 26ರ ಅನ್ನು ಸಂವಿಧಾನ ದಿನಾಚರಣೆ ಎಂದು ಘೋಷಿಸಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಸ್ವಾತಂತ್ರ್ಯ ಪೂರ್ವದಿಂದಲೇ ಅಂಬೇಡ್ಕರ್ ಬಗ್ಗೆ ದ್ವೇಷಭಾವನೆ ಹೊಂದಿದ್ದ ಕಾಂಗ್ರೆಸ್ 1946ರಲ್ಲಿ ಮುಂಬೈ ಪ್ರಾಂತ್ಯದಿಂದ ಸಂವಿಧಾನ ರಚನಾ ಸಭೆಗೆ ಅಂಬೇಡ್ಕರ್ ಆಯ್ಕೆಯಾಗದಂತೆ ವಂಚಿಸಿತು. ಆದರೆ, ಅವರು ಬಂಗಾಳದಿಂದ ಆಯ್ಕೆಯಾಗಿ ನಂತರ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ದೇಶಕ್ಕೆ ಶ್ರೇಷ್ಠ ಸಂವಿಧಾನ ಕೊಟ್ಟಿದ್ದು ಇತಿಹಾಸ. ನೆಹರೂ ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಅಂಬೇಡ್ಕರ್ ಹಿಂದೂ ಕೋಡ್‍ ಬಿಲ್‍ಗೆ ಸಂಬಂಧಿಸಿ ಭಿನ್ನಾಭಿಪ್ರಾಯ ಉಂಟಾಗಿ 1951ರಲ್ಲಿ ಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿ, ಕಾರ್ಮಿಕ ಪಕ್ಷ ಕಟ್ಟಿದರು’ ಎಂದು ನೆನಪಿಸಿದರು.

‘1952ರಲ್ಲಿ ಪಾರ್ಲಿಮೆಂಟ್‍ಗೆ ಜರುಗಿದ ಮೊದಲ ಮಹಾ ಚುನಾವಣೆಯಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಬೇಡ್ಕರ್‌ ಅವರ ವಿರುದ್ಧ ಕಾಂಗ್ರೆಸ್ ಪಕ್ಷವು ನಾರಾಯಣ ಸದೋಬ ಕರ್ಜೋಳ್ಕರ್ ಎಂಬುವರನ್ನು ನಿಲ್ಲಿಸಿ, 15,000 ಮತಗಳಿಂದ ಸೋಲಿಸಿತು. ನಂತರ 1954ರಲ್ಲಿ ನಡೆದ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಇದೇ ಕೆಲಸ ಮಾಡಿತು. ಅಂಬೇಡ್ಕರ್ ನಿಧನದ ನಂತರವು ಕಾಂಗ್ರೆಸ್‍ಗೆ ಅವರ ಮೇಲಿನ ದ್ವೇಷಭಾವನೆ ತಗ್ಗಲಿಲ್ಲ’ ಎಂದಿದ್ದಾರೆ.

‘1956ರಲ್ಲಿ ಸಕ್ಕರೆ ಕಾಯಿಲೆಯಿಂದ ಅವರು ಸತ್ತಾಗ ದೆಹಲಿಯ ಪ್ರತಿಷ್ಠಿತರ ಸ್ಮಾರಕ ಸ್ಥಳದಲ್ಲಿ ಅವರ ಅಂತಿಮ ಸಂಸ್ಕಾರ ಮಾಡಲು ನೆಹರೂ ಒಪ್ಪಲಿಲ್ಲ. ಅನಿವಾರ್ಯವಾಗಿ ಮುಂಬೈನ ದಾದರ್‌ ಚೌಪಾಟಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಅವರು ತೀರಿಕೊಂಡ 33 ವರ್ಷಗಳ ನಂತರ ಅಂದರೆ 1989ರಲ್ಲಿ ಕಾಂಗ್ರೆಸ್ಸೇತರ ಜನ ಮೋರ್ಚಾದ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದಾಗ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಲಾಯಿತು. ಆಗ ವಿ.ಪಿ.ಸಿಂಗರು ಬಿ.ಜೆ.ಪಿ.ಯ ಬಾಹ್ಯ ಬೆಂಬಲದಿಂದ ಪ್ರಧಾನಿಯಾಗಿದ್ದರು ಎಂಬುದು ಗಮನಾರ್ಹ’ ಎಂದು ನೆನಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.