ADVERTISEMENT

ಕಾಂಗ್ರೆಸ್‌ನಲ್ಲಿ ನಾಟಕೀಯ ಬೆಳವಣಿಗೆ

ಸುದ್ದಿಗೋಷ್ಠಿಗೆ ಬರದ ಕಾಂಗ್ರೆಸ್‌ ನಗರಸಭೆ ಸದಸ್ಯರು

​ಪ್ರಜಾವಾಣಿ ವಾರ್ತೆ
Published 7 ಮೇ 2022, 13:09 IST
Last Updated 7 ಮೇ 2022, 13:09 IST

ಹೊಸಪೇಟೆ (ವಿಜಯನಗರ): ಐವರು ಕಾಂಗ್ರೆಸ್‌ನ ನಗರಸಭೆ ಸದಸ್ಯರು ಪಕ್ಷ ತೊರೆದು ಬಿಜೆಪಿ ಸೇರಿದ ನಂತರ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ.

ಪಕ್ಷ ತೊರೆದ ಎಲ್ಲ ಐದು ಜನರು ಪುನಃ ಮಾತೃಪಕ್ಷಕ್ಕೆ ಮರಳಲಿದ್ದಾರೆ ಎಂದು ಶುಕ್ರವಾರ ಕಾಂಗ್ರೆಸ್‌ ಮುಖಂಡರು ತಿಳಿಸಿದ್ದರು. ಅದನ್ನು ಮಾಧ್ಯಮದವರ ಜೊತೆ ಹಂಚಿಕೊಳ್ಳಲು ಶುಕ್ರವಾರ ಸಂಜೆ 4ಕ್ಕೆ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಆದರೆ, 45 ನಿಮಿಷ ಕಳೆದರೂ ಯಾರೊಬ್ಬರು ಸುಳಿಯಲಿಲ್ಲ.

ಬಳಿಕ ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ, ಮುಖಂಡರಾದ ರಾಜಶೇಖರ್‌ ಹಿಟ್ನಾಳ್‌, ವೆಂಕಟರಾವ್‌ ಘೋರ್ಪಡೆ, ವಿನಾಯಕ ಶೆಟ್ಟರ್‌ ಬಂದು ಸುದ್ದಿಗೋಷ್ಠಿ ನಡೆಸಿದರು.

ADVERTISEMENT

‘ಎಲ್ಲ ಸದಸ್ಯರು ತಮ್ಮಿಂದ ತಪ್ಪಾಗಿದೆ ಎಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಎಲ್ಲರೂ ಪುನಃ ಪಕ್ಷಕ್ಕೆ ಮರಳಿದ್ದಾರೆ’ ಎಂದು ತಿಳಿಸಿದರು. ಅವರು ಬರೆದುಕೊಟ್ಟ ಪತ್ರ ಪ್ರದರ್ಶಿಸಿದರು. ಪಕ್ಷದ ಕಚೇರಿಯಲ್ಲಿ ಪುನಃ ಕಾಂಗ್ರೆಸ್‌ಗೆ ಸೇರಿದ ಚಿತ್ರ ಪ್ರದರ್ಶಿಸಿದರು. 35ನೇ ವಾರ್ಡಿನ ರಾಧಾ ಗುಡಗುಂಟಿ ಮಲ್ಲಿಕಾರ್ಜುನ ಅವರ ಪತ್ರ ಹೊರತುಪಡಿಸಿ ಉಳಿದ ನಾಲ್ವರ ಪತ್ರಗಳನ್ನಷ್ಟೇ ತೋರಿಸಿದರು.8ನೇ ವಾರ್ಡಿನ ವಿ. ಹುಲುಗಪ್ಪ, 10ನೇ ವಾರ್ಡಿನ ರೋಹಿಣಿ ವೆಂಕಟೇಶ್‌, 28ನೇ ವಾರ್ಡಿನ ಎಚ್‌.ಕೆ. ಮಂಜುನಾಥ್‌, 33ನೇ ವಾರ್ಡಿನ ಲಕ್ಷ್ಮಿ ಚಂದ್ರಶೇಖರ್‌ ಪರಗಂಟಿ ಸೇರಿದ್ದಾರೆ.

ಆದರೆ, ಸುದ್ದಿಗೋಷ್ಠಿಗೆ ಐದು ಜನರಲ್ಲಿ ಯಾವೊಬ್ಬ ಸದಸ್ಯರು ಬಂದಿರಲಿಲ್ಲ. ಈ ಕುರಿತು ಮುಖಂಡರನ್ನು ಪತ್ರಕರ್ತರು ಪ್ರಶ್ನಿಸಿದಾಗ, ‘ಈಗ ಬರುತ್ತಾರೆ, ಆಗ ಬರುತ್ತಾರೆ. ದಾವಣಗೆರೆಯಿಂದ ಬರುತ್ತಿದ್ದಾರೆ’ ಎಂದು ಸಬೂಬು ಕೊಟ್ಟರು. ಆದರೆ, ಯಾರೊಬ್ಬರು ಸುಳಿಯಲಿಲ್ಲ. ಅಷ್ಟಕ್ಕೆ ಸುದ್ದಿಗೋಷ್ಠಿ ಕೊನೆಗೊಂಡಿತು.

ನಗರದಲ್ಲಿ ಸೋಮವಾರ (ಮೇ 2) ಏರ್ಪಡಿಸಿದ್ದ ಸಮಾರಂಭದಲ್ಲಿ ಐದು ಜನ ಸದಸ್ಯರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಈ ಕುರಿತು ಮೇ 6ರಂದು ‘ಐವರಿಗೆ ಸದಸ್ಯತ್ವ ರದ್ದತಿಗೆ ತೂಗು ಕತ್ತಿ’ ಶೀರ್ಷಿಕೆ ಅಡಿ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.