ADVERTISEMENT

ವಿಮಾನ ನಿಲ್ದಾಣ ಸ್ಥಳಾಂತರಕ್ಕೆ ಚಿಂತನೆ

ಅಖಂಡ ಬಳ್ಳಾರಿ ಜಿಲ್ಲೆಗೆ ಅನುಕೂಲವಾಗುವ ಪ್ರದೇಶದಲ್ಲಿ ನಿರ್ಮಿಸುವ ಕುರಿತು ಚರ್ಚೆ

ಆರ್. ಹರಿಶಂಕರ್
Published 4 ಫೆಬ್ರುವರಿ 2025, 5:26 IST
Last Updated 4 ಫೆಬ್ರುವರಿ 2025, 5:26 IST
ವಿಮಾನ ನಿಲ್ದಾಣಕ್ಕಾಗಿ ಬಳ್ಳಾರಿ ಹೊವಲಯದ ಚಾಗನೂರು–ಸಿರಿವಾರದ ಬಳಿ ವಶಕ್ಕೆ ಪಡೆಯಲಾಗಿರುವ ಭೂಮಿ (ಸಂಗ್ರಹ ಚಿತ್ರ) 
ವಿಮಾನ ನಿಲ್ದಾಣಕ್ಕಾಗಿ ಬಳ್ಳಾರಿ ಹೊವಲಯದ ಚಾಗನೂರು–ಸಿರಿವಾರದ ಬಳಿ ವಶಕ್ಕೆ ಪಡೆಯಲಾಗಿರುವ ಭೂಮಿ (ಸಂಗ್ರಹ ಚಿತ್ರ)    

ಬಳ್ಳಾರಿ: ಹೊರವಲಯದ ಸಿರಿವಾರ–ಚಾಗನೂರು ಸಮೀಪ ರಾಜ್ಯ ಸರ್ಕಾರ ನಿರ್ಮಾಣ ಮಾಡಲು ಉದ್ದೇಶಿಸಿರುವ ವಿಮಾನ ನಿಲ್ದಾಣವನ್ನು ಬೇರೆಡೆ ಸ್ಥಳಾಂತರ ಮಾಡುವ ಕುರಿತು ಗಂಭೀರ ಚರ್ಚೆಗಳು ನಡೆದಿವೆ. 

ಬಳ್ಳಾರಿ–ವಿಜಯನಗರ ಎರಡೂ ಜಿಲ್ಲೆಗಳಿಗೂ ನಿಲುಕುವಂಥ, ಹೆಚ್ಚಿನ ಅನುಕೂಲ ಆಗುವಂಥ ಪ್ರದೇಶದಲ್ಲಿ ವಿಮಾನನಿಲ್ದಾಣ ನಿರ್ಮಾಣ ಮಾಡಬೇಕೆಂಬುದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ ಅವರ ನಿಲುವಾಗಿದ್ದು, ಅಧಿಕಾರಿಗಳು ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಬಳಿ ಅನೌಪಚಾರಿಕವಾಗಿ ಹಲವು ಬಾರಿ ಚರ್ಚೆ ಮಾಡಿದ್ದಾರೆ ಎಂದು ಇಲಾಖೆಯ ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

ಈಗ ಪ್ರಸ್ತಾಪಿಸಿವ ಜಾಗವು ಬಳ್ಳಾರಿಯಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗಕ್ಕೆ ಹತ್ತಿರದಲ್ಲಿದೆ. ಇದರಿಂದ ಆಂಧ್ರಪ್ರದೇಶದ ಜಿಲ್ಲೆಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಈ ವಿಷಯವನ್ನು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ. 

ADVERTISEMENT

ಇದರ ಬದಲಿಗೆ ಬಳ್ಳಾರಿ ಮತ್ತು ಹೊಸಪೇಟೆಗೆ ಮಧ್ಯದಲ್ಲಿ ವಿಮಾನನಿಲ್ದಾಣ ಮಾಡಿದರೆ ಎರಡೂ ಜಿಲ್ಲೆಗಳ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ. ಆರ್ಥಿಕ ಹೊರೆಯೂ ತಪ್ಪುತ್ತದೆ. ವಿಶ್ವದ ಪ್ರವಾಸಿಗರನ್ನು ಸೆಳೆಯುವ ಹಂಪಿ ಮತ್ತು ಕೊಪ್ಪಳಕ್ಕೂ ಅನುಕೂಲವಾಗುತ್ತದೆ ಎಂಬ ಉದ್ದೇಶವಿದೆ. 

ವರ್ಷಕ್ಕೆ 5 ಲಕ್ಷ ವಿದೇಶಿ ಪ್ರವಾಸಿಗರು ಹಂಪಿಗೆ ಬರುತ್ತಾರೆ. ರಾಜ್ಯದ 10 ಲಕ್ಷ ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಸಂಡೂರು ಕೂಡ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶವಾಗಿದೆ. ಕುಡುತಿನಿ ಮತ್ತು ತೋರಣಗಲ್ಲು ಔದ್ಯಮಿಕವಾಗಿ ಬೆಳವಣಿಗೆ ಹೊಂದುತ್ತಿದೆ. ಇದೆಲ್ಲಕ್ಕೂ ಅನುಕೂಲವಾಗುವಂಥ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಿದರೆ ಸೂಕ್ತ ಎಂಬ ನಿಲುವು ಸಚಿವರದ್ದು ಎಂದು ಹೇಳಲಾಗುತ್ತಿದೆ. 

‘ಈಗಾಗಲೇ  ರಾಜ್ಯದ ಕೆಲವು ವಿಮಾನನಿಲ್ದಾಣಗಳು ನಮಗಿಂತಲೂ ಹೊರ ರಾಜ್ಯಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವಂಥ  ಪ್ರದೇಶದಲ್ಲಿ ನೆಲೆಗೊಂಡಿವೆ. ಕೆಂಪೇಗೌಡರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅನಂತಪುರ ಜಿಲ್ಲೆಗೆ ಸನಿಹದಲ್ಲಿದ್ದರೆ, ಎಚ್‌ಎಎಲ್‌ ವಿಮಾನ ನಿಲ್ದಾಣ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ, ಹೊಸೂರು ಕೈಗಾರಿಕಾ ಪ್ರದೇಶದ ಜನರಿಗೆ ಅನುಕೂಲ ಮಾಡಿಕೊಡುವಂಥ ಸ್ಥಳದಲ್ಲಿವೆ. ಸದ್ಯ ಬಳ್ಳಾರಿ ವಿಮಾನನಿಲ್ದಾಣದ ವಿಚಾರದಲ್ಲೂ ಇಂಥದ್ದೇ ಸನ್ನಿವೇಶ ಸೃಷ್ಟಿಯಾಗಬಾರದು. ಹಾಗಾಗಿಯೇ ಸ್ಥಳ ಬದಲಾವಣೆ ಚರ್ಚೆ ನಡೆಯುತ್ತಿದೆ’ ಎಂದು ಸಚಿವರ ಆಪ್ತರೊಬ್ಬರು ತಿಳಿಸಿದರು.   

ಕೆಲ ವಿಮಾನನಿಲ್ದಾಣಗಳು ಒಂದು ಜಿಲ್ಲೆ ಜನರಿಗೆ ಮಾತ್ರ ನಿಲುಕುವಂಥ ಸ್ಥಳದಲ್ಲಿವೆ. ಮುಂದಾಲೋಚನೆಯಿಂದ ನಿರ್ಮಾಣ ಮಾಡಿದ್ದರೆ, ಎರಡು–ಮೂರು ಜಿಲ್ಲೆಗಳನ್ನು ಸಂಪರ್ಕಿಸಬಹುದಿತ್ತು. ಸದ್ಯ ಬಳ್ಳಾರಿ ವಿಮಾನನಿಲ್ದಾಣ ನಿರ್ಮಾಣದಲ್ಲಿ ಅಂಥದ್ದೊಂದು ಅವಕಾಶ ಕಳೆದುಕೊಳ್ಳಬಾರದು. ಎರಡು ಜಿಲ್ಲೆ ಜನರಿಗೆ ಮತ್ತು ವಿವಿಧ ಉದ್ದೇಶಗಳನ್ನು ಈಡೇರಿಸಬಲ್ಲ ಸ್ಥಳದಲ್ಲಿ ನಿರ್ಮಾಣ ಮಾಡಬೇಕು ಎಂದು ಎಂ.ಬಿ.ಪಾಟೀಲ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಬಳ್ಳಾರಿ ವಿಮಾನನಿಲ್ದಾಣಕ್ಕಾಗಿ ಸಿರಿವಾರ–ಚಾಗನೂರು ಎಂಬಲ್ಲಿ 900 ಎಕರೆಯಷ್ಟು ಭೂಪ್ರದೇಶವನ್ನು ವಶಕ್ಕೆ ಪಡೆಯಲಾಗಿದ್ದು, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ತೋರಣಗಲ್‌ನ ವಿದ್ಯಾನಗರದಲ್ಲಿರುವ ಜೆಎಸ್‌ಡಬ್ಲ್ಯು ಏರ್‌ಸ್ಟ್ರಿಪ್‌ನ ಮೂಲಕ ಮಾಸಿಕ 3,600ಕ್ಕೂ ಅಧಿಕ ಮಂದಿ ಪ್ರಯಾಣ ನಡೆಸುತ್ತಾರೆ. 100ಕ್ಕೂ ಹೆಚ್ಚು ವಿಮಾನಗಳು ಇದರ ಮೂಲಕ ಸಂಚರಿಸುತ್ತವೆ ಎಂದು ಹೇಳುತ್ತವೆ ಅಂಕಿ ಅಂಶಗಳು.

ರಾಜ್ಯದ ಮೊದಲ ವಿಮಾನ ನಿಲ್ದಾಣ

ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಸಮೀಪ ಹಳೆಯ ವಿಮಾನನಿಲ್ದಾಣವೊಂದು ಇದೆ. ಸ್ವಾತಂತ್ರ್ಯ ಪೂರ್ವದಲ್ಲೇ ನಿರ್ಮಾಣವಾಗಿರುವ ಈ ನಿಲ್ದಾಣ ಕರ್ನಾಟಕದ ಮೊಟ್ಟಮೊದಲ ವಿಮಾನ ನಿಲ್ದಾಣವೂ ಹೌದು. ಬ್ರಿಟಿಷ್ ಆಳ್ವಿಕೆಯಲ್ಲಿ ಬಳ್ಳಾರಿಗೆ ವ್ಯೂಹಾತ್ಮಕ (ಸ್ಟ್ರ್ಯಾಟಜಿಕಲ್‌ ಪಾಯಿಂಟ್‌) ಪ್ರಾಮುಖ್ಯತೆ ಇತ್ತು.  ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬಳ್ಳಾರಿಯ ವಿಮಾನ ನಿಲ್ದಾಣ ಏರ್ ಸ್ಟ್ರಿಪ್ ಆಗಿ ಕಾರ್ಯನಿರ್ವಹಿಸಿತ್ತು. 1932ರಲ್ಲಿ ಉದ್ಯಮಿ ಜೆ.ಆರ್.ಡಿ ಟಾಟಾ ಅವರು ಲಾಹೋರ್-ಬಾಂಬೆ-ಬಳ್ಳಾರಿ ಮೂಲಕ ಮದ್ರಾಸ್‌ಗೆ ವೈಮಾನಿಕ ಯಾನ ಕೈಗೊಂಡಿದ್ದರು. ಜಿಂದಾಲ್‌ ವಿಮಾನ ನಿಲ್ದಾಣಕ್ಕೆ ಅನುಮತಿ ಸಿಕ್ಕ ಬಳಿಕ ಬಳ್ಳಾರಿ ವಿಮಾನ ನಿಲ್ದಾಣ  ಮಹತ್ವ ಕಳೆದುಕೊಂಡಿದೆ. ಟಾಟಾ ಏರ್‌ಲೈನ್ಸ್‌ ಮತ್ತು ವಾಯುದೂತ್‌ ವಿಮಾನಗಳು ಇಲ್ಲಿ ಸೇವೆ ನೀಡಿವೆ. ಈಗ ಸ್ವಂತದ ವಿಮಾನ ನಿಲ್ದಾಣ ಇಲ್ಲದಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬೇಸರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.