ADVERTISEMENT

ಹೂವಿನಹಡಗಲಿ | ಕಲುಷಿತ ನೀರು ಸರಬರಾಜು: ವಾಂತಿ ಭೇದಿಗೆ 20 ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:26 IST
Last Updated 16 ಜೂನ್ 2025, 14:26 IST
ಹೂವಿನಹಡಗಲಿ ತಾಲ್ಲೂಕು ಮಾನ್ಯರಮಸಲವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಂತಿಭೇದಿಯಿಂದ ಅಸ್ವಸ್ಥರಾದವರು ಚಿಕಿತ್ಸೆ ಪಡೆಯುತ್ತಿರುವುದು.
ಹೂವಿನಹಡಗಲಿ ತಾಲ್ಲೂಕು ಮಾನ್ಯರಮಸಲವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಂತಿಭೇದಿಯಿಂದ ಅಸ್ವಸ್ಥರಾದವರು ಚಿಕಿತ್ಸೆ ಪಡೆಯುತ್ತಿರುವುದು.   

ಹೂವಿನಹಡಗಲಿ : ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.

ಗ್ರಾಮದ ನಿರ್ದಿಷ್ಟ ಪ್ರದೇಶದಲ್ಲಿ ಭಾನುವಾರ ಮತ್ತು ಸೋಮವಾರ ವಾಂತಿಭೇದಿ ಪ್ರಕರಣಗಳು ಪತ್ತೆಯಾಗಿವೆ. ವಡ್ಡರಗೇರಿಯ 13 ಜನ, ಕುರುಬರಗೇರಿಯ 7 ಜನರು ವಾಂತಿಭೇದಿಯಿಂದ ಅಸ್ವಸ್ಥರಾಗಿ ಪಟ್ಟಣದ ಖಾಸಗಿ ನರ್ಸಿಂಗ್ ಹೋಂ, ಹರಪನಹಳ್ಳಿ, ದಾವಣಗೆರೆಯ ಖಾಸಗಿ ಆಸ್ಪತ್ರೆ ಹಾಗೂ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ.

ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯ 5 ಕೊಳವೆ ಬಾವಿಗಳಿದ್ದು, ಇದರಲ್ಲಿ ಒಂದು ಕೊಳವೆಬಾವಿ ನೆಲಮಟ್ಟದಲ್ಲಿದೆ. ವಾಲ್ವ್ ದೋಷದಿಂದ ಮಳೆಯ ನೀರು, ಚರಂಡಿ ತ್ಯಾಜ್ಯ ನೇರವಾಗಿ ಕೊಳವೆ ಬಾವಿ ಸೇರುತ್ತಿದೆ. ಇದೇ ನೀರು ಗ್ರಾಮಕ್ಕೆ ಪೂರೈಕೆಯಾಗಿದೆ. ವಡ್ಡರಗೇರಿ, ಕುರುಬರಗೇರಿಯ ಪೈಪ್ ಲೈನ್ ನಲ್ಲಿ ಕಲುಷಿತ ನೀರು ಮಿಶ್ರಣವಾಗಿರುವುದನ್ನೂ ಅಧಿಕಾರಿಗಳು ಪತ್ತೆಹಚ್ಚಿ, ನೀರು ಸರಬರಾಜು ಸ್ಥಗಿತಗೊಳಿಸಿದ್ದಾರೆ.

ADVERTISEMENT

‘ಗ್ರಾಮದಲ್ಲಿ ಉಲ್ಬಣಿಸಿರುವ ವಾಂತಿಭೇದಿಗೆ ಕಲುಷಿತ ನೀರು ಪೂರೈಕೆ ಕಾರಣ. ಕುಡಿಯುವ ನೀರು, ನೈರ್ಮಲ್ಯ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಕಲುಷಿತ ನೀರು ಮಿಶ್ರಣವಾಗಿರುವ ಬೋರ್ ವೆಲ್ ಸಂಪರ್ಕ ಸ್ಥಗಿತಗೊಳಿಸಿದ್ದೇವೆ. ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನೇ ಸೇವಿಸುವಂತೆ ಗ್ರಾಮದಲ್ಲಿ ಅರಿವು ಮೂಡಿಸುತ್ತಿದ್ದೇವೆ. ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವ ಕೆಲಸ ಮಾಡುತ್ತಿದ್ದೇವೆ’ ಎಂದು ಪಿಡಿಒ ಮಹ್ಮದ್ ರಫಿ ಹೇಳಿದರು.

‘ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿದ್ದೇವೆ. 48 ಗಂಟೆಗಳ ಬಳಿಕ ವರದಿ ಕೈ ಸೇರಲಿದ್ದು, ನಂತರವೇ ನಿಖರ ಕಾರಣ ತಿಳಿಯಲಿದೆ’ ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎಇಇ ಅಂಬೇಡ್ಕರ್ ಸನಗುಂದ ತಿಳಿಸಿದರು.

ತಹಶೀಲ್ದಾರ್ ಭೇಟಿ

ಗ್ರಾಮಕ್ಕೆ ತಹಶೀಲ್ದಾರ್ ಜಿ. ಸಂತೋಷಕುಮಾರ್ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿಗೆ ಸೂಚಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸಪ್ನಾ ಕಟ್ಟಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿ, ಅಸ್ವಸ್ಥರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಚಿಕಿತ್ಸೆ ನೀಡುತ್ತೇವೆ ಎಂದು ತಿಳಿಸಿದರು.

ಹೂವಿನಹಡಗಲಿ ತಾಲ್ಲೂಕು ಮಾನ್ಯರಮಸಲವಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾಂತಿಭೇದಿಯಿಂದ ಅಸ್ವಸ್ಥರಾದವರು ಚಿಕಿತ್ಸೆ ಪಡೆಯುತ್ತಿರುವುದು.
ಹೂವಿನಹಡಗಲಿ ತಾಲ್ಲೂಕು ಮಾನ್ಯರಮಸಲವಾಡ ಗ್ರಾಮಕ್ಕೆ ತಹಶೀಲ್ದಾರ್ ಜಿ.ಸಂತೋಷಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.