ADVERTISEMENT

ಮರಿಯಮ್ಮನಹಳ್ಳಿ: ನಿರಂತರ ಮಳೆಯಿಂದ ಕಪ್ಪಿಟ್ಟ ಜೋಳ

ಕಟಾವು ಹಂತದಲ್ಲಿ ನಿರಾಸೆಗೀಡಾದ ರೈತರು

ಪ್ರಜಾವಾಣಿ ವಿಶೇಷ
Published 2 ಸೆಪ್ಟೆಂಬರ್ 2024, 4:59 IST
Last Updated 2 ಸೆಪ್ಟೆಂಬರ್ 2024, 4:59 IST
ಮರಿಯಮ್ಮನಹಳ್ಳಿ ತಾಂಡಾ ವ್ಯಾಪ್ತಿಯಲ್ಲಿ ನಿರಂತರ ಮಳೆ ಆಗಿರುವ ಕಾರಣ ಜೋಳವು ಕಟಾವು ಹಂತದಲ್ಲಿ ಕಪ್ಪಾಗಿದೆ
ಮರಿಯಮ್ಮನಹಳ್ಳಿ ತಾಂಡಾ ವ್ಯಾಪ್ತಿಯಲ್ಲಿ ನಿರಂತರ ಮಳೆ ಆಗಿರುವ ಕಾರಣ ಜೋಳವು ಕಟಾವು ಹಂತದಲ್ಲಿ ಕಪ್ಪಾಗಿದೆ   

ಮರಿಯಮ್ಮನಹಳ್ಳಿ: ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಜಿಟಿ ಜಿಟಿ ಮಳೆ ಬೀಳುತ್ತಿದೆ. ಇದರಿಂದ ಕಟಾವು ಮಾಡಿದ ಹಾಗೂ ಕಟಾವು ಹಂತಕ್ಕೆ ಬಂದ ಜೋಳ ತೆನೆಗಳು ಕಪ್ಪಾಗುತ್ತಿದ್ದು(ಕಾಡಿಗೆ ರೋಗ) ರೈತರಲ್ಲಿ ಆತಂಕ ಮೂಡಿಸಿದೆ.

ಈ ಬಾರಿ ಮುಂಗಾರು ಆರಂಭದಲ್ಲಿ ಉತ್ತಮವಾಗಿ ಮಳೆ ಸುರಿದಿದ್ದರಿಂದ ಹೋಬಳಿ ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿತ್ತು. ಬಹುತೇಕ ರೈತರು ಈಗಾಗಲೇ ಕಟಾವು ಮಾಡಿ ತೆನೆಗಳನ್ನು ರಾಶಿ ಹಾಕಿದ್ದಾರೆ.

ಆದರೆ ಕಟಾವು ಮಾಡಿ ರಾಶಿ ಹಾಕಿದ್ದ ತೆನೆಗಳನ್ನು ಒಣಗಿಸಲು ಆಗದೆ ರೈತರು ಪರದಾಡುವಂತಾಗಿದ್ದು, ಹತ್ತಿಕೊಂಡ ಮಳೆಗೆ ರಾಶಿಯಲ್ಲಿಯೇ ಕೆಲವಡೆ ಜೋಳಕ್ಕೆ ಕಾಡಿಗೆ ರೋಗ, ಫಂಗಸ್ ಕಾಣಿಸಿಕೊಂಡಿದೆ. ಕೆಲವೆಡೆ ತೆನೆಗಳಿಲ್ಲಿಯೇ ಕಾಳುಗಳು ಮೊಳಕೆಯೊಡಿರುವುದು ರೈತರನ್ನು ನಷ್ಟಕ್ಕೀಡು ಮಾಡಿದೆ.

ADVERTISEMENT

ಕಳೆದ ವರ್ಷ ಬರಗಾಲದಿಂದಾಗಿ ಜೋಳದ ಬೆಳೆ ಸಮರ್ಪಕವಾಗಿರಲಿಲ್ಲ. ಈ ಬಾರಿ ಡಣಾಯಕನಕೆರೆ ಮಾಗಾಣಿ, ಹಾರುವನಹಳ್ಳಿ, ಚಿಲಕನಹಟ್ಟಿ, ತಿಮ್ಮಲಾಪುರ ಭಾಗ ಸೇರಿದಂತೆ ಇತರೆಡೆ ಒಂದು ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಜೋಳ ಬೆಳೆದಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು.

ಭಾನುವಾರ ಮಧ್ಯಾಹ್ನದ ವೇಳೆಗೆ ಮಳೆ ಕೊಂಚ ಬಿಡುವು ನೀಡಿತು. ಮರಿಯಮ್ಮನಹಳ್ಳಿ ತಾಂಡಾ ಬಳಿ ನೂರಕ್ಕು ಹೆಚ್ಚು ರೈತರು ಜೋಳ ಕಟಾವು ಮಾಡಿ ರಾಶಿ ಹಾಕಿ ತಾಟಪಾಲುಗಳಿಂದ ಮುಚ್ಚಿದ್ದ ಗೂಡುಗಳನ್ನು ತೆರೆದು ತೆನೆಗಳನ್ನು ಒಣಗಿಸುವ ಕಾರ್ಯದಲ್ಲಿ ನಿರತವಾಗಿದ್ದ ದೃಶ್ಯ ಕಂಡು ಬಂತು.

‘ನೋಡ್ರಿ ಕಳೆದ ವರ್ಷ ಬರಗಾಲದಿಂದ ಜೋಳ ಬೆಳೆಯಕ್ಕಾಗಲಿಲ್ಲ. ಈ ಬಾರಿ ಮಳಿ ಚೆನ್ನಾಗಿ ಆತು ಅಂತ ಮೂರು ಎಕರೆಯಲ್ಲಿ ₹20 ಸಾವಿರ ಖರ್ಚು ಮಾಡಿ ಊಟಕ್ಕಾಗಿ ಜೋಳ ಬೆಳೆದಿವಿ, ಬೆಳೆನೂ ಚೆನ್ನಾಗಿ ಬಂದೈತಿ, ಆದ್ರ ಕಟಾವು ಮಾಡಿ ರಾಶಿ ಹಾಕಿದ್ದೇವು. ಇನ್ನೇನೆ ಕಾಳ ಮಾಡಬೇಕು, ಆದರೆ ಜೋಳ ಕಪ್ಪಾಗಿವೆ’ ಎಂದು ಮರಿಯಮ್ಮನಹಳ್ಳಿ ತಾಂಡಾದ ರೈತ ಚಂದ್ರಾನಾಯ್ಕ ಹೇಳಿದರು.

‘ನಮ್ ರಾಶಿ ನೋಡ್ರಿ, ರಾಶಿಯಲ್ಲಿನ ತೆನೆಗಳಲ್ಲಿ ಕಾಳು ಮೊಳಕೆ ಒಡೆಯುತ್ತಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂಗ ಆಗೇತಿ. ಈಗ ಜೋಳಕ್ಕೆ ಮೂರು ಸಾವಿದಂಗ ರೇಟ್ ಐತಿ. ಆದ್ರ ಹಿಂಗಾ ಕಪ್ಪಾದ್ರ ಊಟಕ್ಕೂ ಬರಗಿಂಲ್ಲ, ಅಲ್ದ ಎರಡೂವರೆ ಸಾವಿರ ಸಿಗದೂ ಕಷ್ಟ. ಮಳೆ ಹೀಗೆ ಮುಂದುವರಿದರೆ ಜೋಳವೆಲ್ಲ ಕೋಳಿ ಫಾರಂಗೆ ಹೋಗುವ ಗತಿ ಬರುತ್ತದೆ’ ಎಂದು ಮರಿಯಮ್ಮನಹಳ್ಳಿ ತಾಂಡಾ ರೈತರಾದ ರಾಮಾನಾಯ್ಕ, ಲಕ್ಷ್ಮಣನಾಯ್ಕ, ಸೋಮ್ಲನಾಯ್ಕ, ಧರ್ಮಾನಾಯ್ಕ ಸಂಕಷ್ಟ ವ್ಯಕ್ತಪಡಿಸಿದರು.

ಕಳೆದ ಮುರ್ನಾಲ್ಕು ದಿನಗಳಿಂದ ಹತ್ತಿಕೊಂಡ ಜಿಟಿ ಜಿಟಿ ಮಳೆ ಭಾನುವಾರ ಮಧ್ಯಾಹ್ನದ ವೇಳೆಗೆ ಕೊಂಚ ಬಿಡುವು ನೀಡುತ್ತಿದ್ದಂತೆ ಮರಿಯಮ್ಮನಹಳ್ಳಿ ತಾಂಡಾ ಬಳಿ ಕಟಾವು ಮಾಡಿ ರಾಶಿ ಹಾಕಿದ ಜೋಳದ ತೆನೆಗಳನ್ನು ಒಣಗಿಸಲು ಪ್ರಯತ್ನಿಸುತ್ತಿರುವ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.