ADVERTISEMENT

ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ; ಮುಗಿದ ಅಧ್ಯಾಯ?

ಬಾಗಿಲು ಮುಚ್ಚಿರುವ ಸ್ವಾತಂತ್ರ್ಯಪೂರ್ವದ ಕಾರ್ಖಾನೆಯ ವಸ್ತುಗಳು ಶೀಘ್ರವೇ ಸೇರಲಿವೆ ಗುಜರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
ಹೊಸಪೇಟೆಯ ಚಿತ್ತವಾಡ್ಗಿಯಲ್ಲಿನ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ
ಹೊಸಪೇಟೆಯ ಚಿತ್ತವಾಡ್ಗಿಯಲ್ಲಿನ ಐ.ಎಸ್‌.ಆರ್‌. ಸಕ್ಕರೆ ಕಾರ್ಖಾನೆ   

ಹೊಸಪೇಟೆ: ಕಬ್ಬು ಬೆಳೆಗಾರರ ಜೀವನಾಡಿಯೆಂದೇ ಗುರುತಿಸಿಕೊಂಡಿದ್ದ ಇಲ್ಲಿನ ಇಂಡಿಯನ್‌ ಶುಗರ್ಸ್‌ ರಿಫೈನರಿ (ಐ.ಎಸ್‌.ಆರ್‌.) ಸಕ್ಕರೆ ಕಾರ್ಖಾನೆ ಇತಿಹಾಸದ ಪುಟ ಸೇರಲು ದಿನಗಣನೆ ಆರಂಭವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲೇ (1939–40ರಲ್ಲಿ) ಈ ಕಾರ್ಖಾನೆಯನ್ನು ಆರಂಭಿಸಲಾಗಿತ್ತು. ಸತತ 80 ವರ್ಷ ಕಬ್ಬು ನುರಿಸಿದ ಇತಿಹಾಸ ಹೊಂದಿರುವ ಕಾರ್ಖಾನೆ 2016ರ ಆಗಸ್ಟ್‌ನಲ್ಲಿ ಏಕಾಏಕಿ ಕೆಲಸ ಸ್ಥಗಿತಗೊಳಿಸಿತು. ನಾಲ್ಕು ವರ್ಷಗಳಾದರೂ ಮತ್ತೆ ಕೆಲಸ ಆರಂಭಿಸಿಲ್ಲ. ಪುನಃ ಆರಂಭಗೊಳ್ಳುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ.

ಕಾರ್ಖಾನೆಯ ಮಾಲೀಕರು ಮತ್ತೆ ಕಾರ್ಖಾನೆ ಆರಂಭಿಸಲು ಆಸಕ್ತಿ ತೋರುತ್ತಿಲ್ಲ. ಅದನ್ನು ಪುಷ್ಟೀಕರಿಸುವಂತೆ ಇತ್ತೀಚೆಗೆ ಕಾರ್ಖಾನೆಯ ವಸ್ತುಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಿರುವುದು. ಈಗಾಗಲೇ ಅದರ ವಸ್ತುಗಳನ್ನು ಖರೀದಿಸಲು ಆಸಕ್ತಿ ತೋರಿರುವವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಕಾರ್ಖಾನೆ ಬಂದ್‌ ಆಗುವುದು ಖಚಿತವಾಗಿದೆ.

ADVERTISEMENT

ಯಾರಿಗೆಲ್ಲ ಸಮಸ್ಯೆ:

ಒಂದು ಅಂದಾಜಿನ ಪ್ರಕಾರ, ತಾಲ್ಲೂಕು ವ್ಯಾಪ್ತಿಯ 12 ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಅಲ್ಪ ಪ್ರಮಾಣದ ಕಬ್ಬು ಆಲೆಮನೆಗಳಿಗೆ ಹೋದರೆ ಮಿಕ್ಕುಳಿದದೆಲ್ಲ ಐ.ಎಸ್‌.ಆರ್‌. ಕಾರ್ಖಾನೆಗೆ ರೈತರು ಪೂರೈಸುತ್ತಿದ್ದರು. ಕಾರ್ಖಾನೆ ಬಂದ್‌ ಆಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

‘ತಾಲ್ಲೂಕಿನಲ್ಲಿ ಸಣ್ಣ, ಅತಿ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿಂದೆ ಅವರು ನೇರವಾಗಿ ಚಕ್ಕಡಿಗಳಲ್ಲಿ ಐ.ಎಸ್‌.ಆರ್‌. ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗುತ್ತಿದ್ದರು. ಕಾರ್ಖಾನೆ ಮುಚ್ಚಿರುವುದರಿಂದ ಅವರಿಗೆ ಸಮಸ್ಯೆಯಾಗುತ್ತಿದೆ’ ಎಂದು ರೈತ ಬಸವರಾಜ ಸಮಸ್ಯೆ ಬಿಚ್ಚಿಟ್ಟರು.

‘ದೂರದ ಕಾರ್ಖಾನೆಗಳಿಗೆ ಕಬ್ಬು ಕಳುಹಿಸಿದರೆ ಹಾಕಿರುವ ಬಂಡವಾಳ ಕೂಡ ಕೈಸೇರುತ್ತಿಲ್ಲ. ಇದರಿಂದಾಗಿ ಕೆಲ ರೈತರು ಕಬ್ಬು ಬೆಳೆಯುವುದನ್ನೇ ಬಿಟ್ಟಿದ್ದಾರೆ. ಮತ್ತೆ ಕೆಲವರು ಕಡಿಮೆ ಹಣ ಸಿಕ್ಕರೂ ಸಾಕು ಎಂಬಂತೆ ಆಲೆಮನೆಗಳಿಗೆ ಪೂರೈಸುತ್ತಿದ್ದಾರೆ’ ಎಂದು ಹೇಳಿದರು.

ಕಾರ್ಖಾನೆ ಪ್ರತಿ ದಿನ ಎರಡರಿಂದ ಎರಡೂವರೆ ಸಾವಿರ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ. ಕಾರ್ಖಾನೆಯ ಸುತ್ತಮುತ್ತ ಹೋಟೆಲ್‌, ಬೀಡಾ ಅಂಗಡಿ ಸೇರಿದಂತೆ ಇತರೆ ಸಣ್ಣಪುಟ್ಟ ವ್ಯಾಪಾರ ನಡೆಯುತ್ತಿತ್ತು. ಕಬ್ಬು ನುರಿಕೆ ಸೇರಿದಂತೆ ದಿನಕ್ಕೆ ಸರಿಸುಮಾರು ₹50 ಲಕ್ಷ ವಹಿವಾಟು ನಡೆಯುತ್ತಿತ್ತು. ಬಾಗಿಲು ಬಂದ್‌ ಆಗಿರುವುದರಿಂದ ಇಡೀ ಚಿತ್ತವಾಡ್ಗಿಗೆ ಗರ ಬಡಿದಂತಾಗಿದೆ. ಜನರಿಗೆ ಕೆಲಸವಿಲ್ಲದೆ ಸುಮ್ಮನೆ ಕೂರುವಂತಾಗಿದೆ. ರೈತರ ಕಣ್ಣ ಮುಂದೆಯೇ ಕಾರ್ಖಾನೆ ಬಂದ್‌ ಆದರೂ ಅವರು ಅಸಹಾಯಕರಾಗಿ ನೋಡಿಕೊಂಡು ಇರುವಂತಾಗಿದೆ.

ಬೀದಿಗೆ ಬಿದ್ದ ಕಾರ್ಮಿಕರು:

ಕಾರ್ಖಾನೆಯಲ್ಲಿ 400ರಿಂದ 450 ಜನ, ಡಿಸ್ಟಿಲರಿಯಲ್ಲಿ 250 ಮಂದಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಡಿಸ್ಟಿಲರಿ ಕೂಡ ಬಂದ್‌ ಆಗಿದ್ದು, ಎಲ್ಲರಿಗೂ ಬಾಕಿ ಹಣ ಕೊಟ್ಟು ಕಳುಹಿಸಲಾಗಿದೆ. ಆದರೆ, ಕಾರ್ಖಾನೆಯವರ ಬಾಕಿ ಹಣ ಪಾವತಿಯಾಗಿಲ್ಲ.

ಸದ್ಯ 24 ಕಾಯಂ ಸಿಬ್ಬಂದಿ, 48 ಕಾರ್ಮಿಕರು, 82 ಸೀಸನಲ್‌ ಸಿಬ್ಬಂದಿಯ ಹಾಜರಾತಿ ಪಡೆಯಲಾಗುತ್ತಿದೆ. ಆದರೆ, ಕಳೆದ 42 ತಿಂಗಳಿಂದ ಅವರಿಗೆ ವೇತನ ಕೊಟ್ಟಿಲ್ಲ. ಇದರಿಂದಾಗಿ ಅವರು ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ. ಈ ಸಂಬಂಧ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.

‘ಕಾರ್ಖಾನೆ ಪುನಃ ಆರಂಭಿಸುವುದು ಅಥವಾ ಕೈಬಿಡುವುದು ಮಾಲೀಕರಿಗೆ ಬಿಟ್ಟ ವಿಚಾರ. ಆದರೆ, ಬಾಕಿ ಉಳಿಸಿಕೊಂಡಿರುವ ವೇತನ ಸಂಬಂಧ ನಮ್ಮನ್ನು ಕರೆದು ಮಾತನಾಡಬೇಕು. ಇಲ್ಲವಾದಲ್ಲಿ ಕೋರ್ಟ್‌ ಮೊರೆ ಹೋಗಲಾಗುವುದು’ ಎಂದು ಐ.ಎಸ್‌.ಆರ್‌. ವರ್ಕರ್ಸ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಜಿ. ಅನ್ವರ್‌ ಬಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಸಂಬಂಧ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.