ADVERTISEMENT

ಜಿಂದಾಲ್‌ಗೆ ಜಮೀನು ಕೊಡುವುದಕ್ಕೆ ವಿರೋಧ

ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಸಿಪಿಎಂ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:36 IST
Last Updated 5 ಜೂನ್ 2019, 15:36 IST

ಹೊಸಪೇಟೆ: ‘ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಜಿಂದಾಲ್‌ ಕಂಪೆನಿಗೆ ಜಿಲ್ಲೆಯ ತೋರಣಗಲ್‌ ಬಳಿ ಮಾರಾಟ ಮಾಡಲು ಉದ್ದೇಶಿಸಿರುವ ಜಮೀನಿನ ಒಪ್ಪಂದವನ್ನು ಕೂಡಲೇ ರದ್ದುಪಡಿಸಬೇಕು’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌.ಎಸ್‌. ಬಸವರಾಜ ಒತ್ತಾಯಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೋರಣಗಲ್‌ ಸುತ್ತಮುತ್ತ ಪ್ರತಿ ಎಕರೆಗೆ ಸದ್ಯ ₹54 ಲಕ್ಷ ಬೆಲೆ ಇದೆ. ಕೆ.ಐ.ಎ.ಡಿ.ಬಿ. ಈ ಬೆಲೆ ನಿಗದಿಪಡಿಸಿದೆ. ಹೀಗಿರುವಾಗ ಜಿಂದಾಲ್‌ ಕಂಪೆನಿಗೆ ಪ್ರತಿ ಎಕರೆ ಜಮೀನನ್ನು ಒಂದೂವರೆ ಲಕ್ಷದಲ್ಲಿ ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ. ಅದು ಕೂಡ 3,667 ಎಕರೆ ಭೂಮಿ. ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತದೆ’ ಎಂದು ಹೇಳಿದರು.

‘ಜಿಂದಾಲ್‌ ಮಾಡಿರುವ ಅಕ್ರಮಗಳಿಗೆ ಲೆಕ್ಕವಿಲ್ಲ. ಅಕ್ರಮ ಗಣಿಗಾರಿಕೆಯ ವರದಿಯಲ್ಲಿ ಜಿಂದಾಲ್‌ ಹೆಸರು ಕೂಡ ಇದೆ. ಸಾವಿರಾರು ಕೋಟಿ ರೂಪಾಯಿ ಸರ್ಕಾರಕ್ಕೆ ಈ ಕಂಪೆನಿ ವಂಚನೆ ಮಾಡಿದೆ. ಬಲವಂತವಾಗಿ ರೈತರ ಸಾಗುವಳಿ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಅಧಿಕೃತವಾಗಿ ಭೂಮಿ ವಶಪಡಿಸಿಕೊಂಡ ರೈತರಿಗೆ ಕೆಳಹಂತದ ನೌಕರಿಗಳನ್ನು ಕೊಟ್ಟಿದೆ. ಎಲ್ಲರೂ ಗುತ್ತಿಗೆ ಆಧಾರಿತ ನೌಕರರಾಗಿದ್ದಾರೆ. ಮೇಲ್ದರ್ಜೆಯ ನೌಕರಿಗಳನ್ನು ಉತ್ತರ ಭಾರತದವರಿಗೆ ಕೊಟ್ಟು ಕನ್ನಡಿಗರಿಗೆ ಅನ್ಯಾಯವೆಸಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಜಿಂದಾಲ್‌ ಗುತ್ತಿಗೆ ಆಧಾರದ ಮೇಲೆ ಕೊಟ್ಟಿರುವ ಭೂಮಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆ ನಿಗದಿ ಮಾಡಬೇಕು. ಕಂಪೆನಿಯಿಂದ ಮುಂಗಡವಾಗಿ ಠೇವಣಿ ಪಡೆಯಬೇಕು ಎಂಬ ಕಾನೂನು ಇಲಾಖೆಯ ಸಲಹೆಯನ್ನೇ ಸರ್ಕಾರ ತಿರಸ್ಕರಿಸಿದೆ. ಸಂಘ ಸಂಸ್ಥೆಗಳ ವಿರೋಧದ ನಡುವೆಯೂ ಭೂಮಿ ಪರಭಾರೆ ಮಾಡಲು ಹೊರಟಿರುವುದು ಆತಂಕದ ವಿಚಾರ’ ಎಂದು ಹೇಳಿದರು.

‘ಜಿಲ್ಲೆಯ ಸುಶೀಲನಗರ, ಜಿ. ನಾಗಲಾಪುರ, ಗುಂಡಾ ಅರಣ್ಯ ಪ್ರದೇಶ ಸೇರಿದಂತೆ ಹಲವೆಡೆ ಅನೇಕ ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರನ್ನು ಏಕಾಏಕಿ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ರಾಮಘಡ, ದೋಣಿಮಲೈ, ಮಲಗೊಳ್ಳದಲ್ಲಿ ಜನವಿರೋಧದ ನಡುವೆ ಜಿಂದಾಲ್‌ಗೆ ಭೂಮಿ ನೀಡಲಾಗಿದೆ. ಯಾವ ಕಂಪೆನಿ ಗಣಿಗಾರಿಕೆಯಲ್ಲಿ ಅಕ್ರಮ ಎಸಗಿದೆಯೋ ಅದಕ್ಕೆ ಪುನಃ ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಿರುವುದು ದುರದೃಷ್ಟಕರ’ ಎಂದರು. ಈಗ ಸರ್ಕಾರವೇ ಬೆಲೆಬಾಳುವ ಜಮೀನನ್ನು ಕಡಿಮೆ ಬೆಲೆಗೆ ಕೊಡುತ್ತಿರುವುದು ದೊಡ್ಡ ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಹಿಂದೆ ಸರಿಯುವವರೆಗೆ ಜೂ. 6ರಿಂದ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪಕ್ಷದ ಮುಖಂಡರಾದ ಆರ್‌. ಭಾಸ್ಕರ್‌ ರೆಡ್ಡಿ, ಬಿ. ಮಾಳಮ್ಮ, ಎ. ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.