ಕೂಡ್ಲಿಗಿ: ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿ.ಬಸವರಾಜ ಎಂಬ ಆರೋಪಿಯನ್ನು ಕೂಡ್ಲಿಗಿ ಪೊಲೀಸರು ಬಂಧಿಸಿದ್ದಾರೆ.
ಸಂಡೂರು ತಾಲ್ಲೂಕಿನ ಹಿರೇಕೆರೇನಹಳ್ಳಿ ಗ್ರಾಮದ ಬಿ.ಬಸವರಾಜ, ತಾಲ್ಲೂಕಿನ ಶಿವಪುರ ಗೊಲ್ಲರಹಟ್ಟಿಯಲ್ಲಿ ಪಂಚಾಯ್ತಿಯಿಂದ ನಿರ್ಮಾಣ ಮಾಡಿದ್ದ ಶುದ್ಧ ನೀರಿನ ಘಟಕದ ಗಾಜಿನ ಬಾಗಿಲು ಒಡೆದು ಕಾಯಿನ್ ಬಾಕ್ಸ್ ನಲ್ಲಿದ್ದ ₹ 1200 ನಗದು ಹಾಗೂ ₹ 20 ಸಾವಿರ ಬೆಲೆ ಬಾಳುವ ಮೋಟರ್ ಪಂಪ್ ಅನ್ನು ಜೂನ್ 3 ರಂದು ಕಳ್ಳತನ ಮಾಡಿದ್ದ. ಅದೇ ರೀತಿ ಜುಲೈ 24ರಂದು ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜೂನ್ 11ರಂದು ತಾಲ್ಲೂಕಿನ ಕೆ.ದಿಬ್ಬದಹಳ್ಳಿಯಲ್ಲಿನ ಶುದ್ಧ ನೀರಿನ ಘಟಕದ ₹ 25 ಸಾವಿರ ಬೆಲೆ ಬಾಳುವ ಕಾಯಿನ್ ಬಾಕ್ಸ್ ಮತ್ತು ಅದಕ್ಕೆ ಅಳವಡಿಸಿದ್ದ ಮೋಟರ್ ಪಂಪ್ ಅನ್ನು ಕಳ್ಳತನ ಮಾಡಿದ್ದು, ಗುಡೇಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶ್ರೀಹರಿಬಾಬು.ಬಿ.ಎಲ್. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸಲೀಂ ಪಾಷಾ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಹಾಗೂ ಕೂಡ್ಲಿಗಿ ಸಿಪಿಐ ಸುರೇಶ್ ತಳವಾರ್ ಮಾರ್ಗದರ್ಶನದಲ್ಲಿ ಪ್ರಕರಣ ಭೇದಿಸಿದ ಕೂಡ್ಲಿಗಿ ಪಿಎಸೈ ಸಿ.ಪ್ರಕಾಶ್, ಕಾನ್ಸ್ಟೇಬಲ್‌ಗಳಾದ ಬಂಡೆ ರಾಘವೇಂದ್ರ, ಜಿ.ಹಂಪಣ್ಣ, ಪಿ.ಎನ್.ಮಂಜುನಾಥ, ಕೆ.ಜಗದೀಶ್ ಅವರಿದ್ದ ತಂಡವು ಪಟ್ಟಣದ ಬಸವೇಶ್ಚರ ವೃತ್ತದಲ್ಲಿ ಸೋಮವಾರ ಆರೋಪಿಯನ್ನು ಬಂಧಿಸಿ, ₹ 30 ಸಾವಿರ ಬೆಲೆ ಬಾಳುವ ಮೋಟರ್ ಸೈಕಲ್ ಹಾಗೂ ₹ 9 ಸಾವಿರ ನಗದನ್ನು ಅತನಿಂದ ವಶಪಡಿಸಿಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.