ADVERTISEMENT

ಅಪರಾಧ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:57 IST
Last Updated 20 ಸೆಪ್ಟೆಂಬರ್ 2019, 5:57 IST

ಹೊಸಪೇಟೆ: ಜೆ.ಪಿ. ನಗರದಲ್ಲಿ ಮಂಗಳವಾರ ರಾತ್ರಿ ಬಂಗಾರದ ಅಂಗಡಿ ಮಾಲೀಕ ಕೆ.ಪಿ. ಗುರುರಾಜ್‌ ಅವರ ಮನೆಯ ಬೀಗ ಮುರಿದು ₹38 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.

’ಅಂಗಡಿಯಲ್ಲಿನ 1.22 ಕೆ.ಜಿ. ಬಂಗಾರ, 34 ಗ್ರಾಂ ವಜ್ರ ಹಾಗೂ ₹9 ಲಕ್ಷ ನಗದು ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ. ಗುರುರಾಜ್‌ ಅವರು ಕುಟುಂಬ ಸದಸ್ಯರೊಂದಿಗೆ ಬೆಂಗಳೂರಿಗೆ ಹೋಗಿದ್ದರು. ಈ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಗುರುರಾಜ್‌ ಅವರು ನೀಡಿದ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಎಸ್ಪಿ. ಬಿ.ಎನ್‌. ಲಾವಣ್ಯ, ಡಿವೈಎಸ್ಪಿ ವಿ. ರಘುಕುಮಾರ, ಗ್ರಾಮೀಣ ಠಾಣೆ ಸಿಪಿಐ ಪರಸಪ್ಪ ಭಜಂತ್ರಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಆರೋಪಿ ಬಂಧನ:

ಚಿನ್ನಾಭರಣಗಳೊಂದಿಗೆ 2004ಲ್ಲಿ ಪರಾರಿಯಾಗಿದ್ದ ಆರೋಪಿ ಗುಜರಾತಿನ ರಾಕೇಶ್‌ ಕುಮಾರ್‌ ಸೋನಿ ಎಂಬಾತನನ್ನು ಪಟ್ಟಣ ಠಾಣೆ ಪೊಲೀಸರು ಆರು ವರ್ಷಗಳ ನಂತರ ಇಲ್ಲಿನ ಹಳೆ ಮೇದಾರ ಓಣಿಯಲ್ಲಿ ಬುಧವಾರ ಬಂಧಿಸಿದ್ದಾರೆ.

’ಪ್ರಕಾಶ ಸೋನಿ ಎಂಬಾತ ಬ್ರೋಕರ್‌ ಅಂಗಡಿ ನಡೆಸುತ್ತಿದ್ದ. ಧೀರಜ್‌ ಕುಮಾರ್‌ ಸೋನಿ, ರಾಕೇಶ್‌ ಕುಮಾರ್‌ ಸೋನಿ ಮತ್ತು ಮೋಹನ್‌ ಕುಮಾರ್‌ ಸೋನಿ ಎಂಬುವರು ಸಾರ್ವಜನಿಕರಿಂದ ಚಿನ್ನಾಭರಣ ಗಿರವಿ ಇಟ್ಟುಕೊಳ್ಳುತ್ತಿದ್ದರು. 2004ರಲ್ಲಿ ಚಿನ್ನಾಭರಣಗಳನ್ನು ಗಿರವಿ ಇಟ್ಟುಕೊಂಡು ರಾಕೇಶ್‌ ಪರಾರಿಯಾಗಿದ್ದ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶೋಧ ನಡೆಸಿ, ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ‘ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಹೋಟೆಲ್‌ ಮಾಲೀಕನ ವಿರುದ್ಧ ಪ್ರಕರಣ:

ಮಂಗಳವಾರ ಮ್ಯಾನ್‌ಹೋಲ್‌ಗೆ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಿದ ನಗರದ ಪೈ ಹೋಟೆಲ್‌ ಮಾಲೀಕ ಗೋಪಾಲ್‌ ಪೈ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಷಯವನ್ನು ಸಾಮಾಜಿಕ ಹೋರಾಟಗಾರ ಪ.ಯ. ಗಣೇಶ್‌ ಅವರು ನಗರಸಭೆ ಪೌರಾಯುಕ್ತರಾದ ಪಿ. ಜಯಲಕ್ಷ್ಮಿ ಅವರ ಗಮನಕ್ಕೆ ತಂದಿದ್ದರು. ಈ ಕುರಿತು ’ಪ್ರಜಾವಾಣಿ’ ಸೆ. 18ರಂದು ವರದಿ ಪ್ರಕಟಿಸಿತ್ತು. ಬಳಿಕ ಜಯಲಕ್ಷ್ಮಿ ಅವರು ಬುಧವಾರ ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದರು. ಅವರ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.