ADVERTISEMENT

ಆಧುನಿಕ ಶಿಕ್ಷಣದಿಂದ ಗುಮಾಸ್ತರ ಸೃಷ್ಟಿ: ಕೆ. ಕೇಶವ ಶರ್ಮಾ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 11:57 IST
Last Updated 18 ಡಿಸೆಂಬರ್ 2018, 11:57 IST
ಕೆ. ಕೇಶವ ಶರ್ಮಾ
ಕೆ. ಕೇಶವ ಶರ್ಮಾ   

ಹೊಸಪೇಟೆ: ‘ವಸಾಹತುಷಾಹಿ ವ್ಯವಸ್ಥೆಯು ಆಧುನಿಕ ಶಿಕ್ಷಣದ ಹೆಸರಿನಲ್ಲಿ ಗುಮಾಸ್ತರನ್ನು ಸೃಷ್ಟಿಸುತ್ತಿದೆ’ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೆ. ಕೇಶವ ಶರ್ಮಾ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ್ರಪ್ರತಿ ಶಾಸ್ತ್ರ ವಿಭಾಗವು ಮಂಗಳವಾರ ವಿ.ವಿ.ಯಲ್ಲಿ ಹಮ್ಮಿಕೊಂಡಿದ್ದ ‘ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಆಧುನಿಕ ವಿದ್ವತ್ತು’ ಕುರಿತು ಉಪನ್ಯಾಸ ನೀಡಿದರು.

‘ಆಧುನಿಕ ಶಿಕ್ಷಣದಿಂದ ನಮ್ಮ ಓದುವ, ಗ್ರಹಿಸುವ ಕ್ರಮ ಬೇರೆಯಾಗಿದೆ. ಇಂಗ್ಲಿಷಿನ ಜ್ಞಾನ ಹೊಂದಿದ ಲೇಖಕರು ನಮ್ಮ ಕೃತಿಗಳೊಂದಿಗೆ ಅನುಸಂಧಾನ ಮಾಡುವ ಕ್ರಮವನ್ನು ರೂಪಿಸಿಕೊಂಡರು. ಇದು ಪಲ್ಲಟಗೊಳ್ಳುತ್ತಿರುವ ಬೌದ್ಧಿಕ ಚಹರೆಯಾಯಿತು. ಡಿ.ಎಲ್‌. ನರಸಿಂಹಚಾರ್‌, ಫ.ಗು. ಹಳಕಟ್ಟಿ ಅವರು ಬಹಳ ದೊಡ್ಡ ಬೌದ್ಧಿಕ ಜಗತ್ತನ್ನು ಪ್ರತಿನಿಧಿಸುತ್ತಾರೆ. ವಸಾಹತು ಕಾಲದ ಅನೇಕ ಬುದ್ಧಿಜೀವಿಗಳು ಉದ್ದೇಶಪೂರ್ವಕವಾಗಿಯೇ ಹಳೆಗನ್ನಡ ಕಾವ್ಯಗಳನ್ನು ಓದುವ ಮತ್ತು ಪ್ರವೇಶಿಸುವುದಕ್ಕೆ ಬೇಕಾದ ಪರಿಕರಗಳನ್ನು ನಿರ್ಮಿಸುವ ಕೆಲಸ ಆರಂಭಿಸಿದರು. ಬೇಂದ್ರೆ, ಕುವೆಂಪು, ಸೇಡಿಯಾಪು ಮತ್ತೊಂದು ಪರಂಪರೆ ಹುಟ್ಟು ಹಾಕಿದರು’ ಎಂದರು.

ADVERTISEMENT

‘ಇಂದು ಹಳೆಗನ್ನಡವನ್ನು ಹೇಗೆ ಓದಬೇಕು, ಗ್ರಹಿಸಬೇಕು ಎಂಬ ಸಮಸ್ಯೆಯಲ್ಲಿ ತೊಳಲಾಡುತ್ತಿದ್ದೇವೆ. ವಿದ್ಯಾರ್ಥಿಗಳ ಮನಸ್ಸನ್ನು ನಿಯಂತ್ರಿಸಲಾಗುತ್ತಿದೆ. ಆ ಮೂಲಕ ಪರೀಕ್ಷೆಯಲ್ಲಿ ಪಾಸು, ಫೇಲು ಎಂಬ ಭಯ ಮೂಡಿಸಲಾಗುತ್ತಿದೆ. ಜ್ಞಾನವನ್ನು ಯಾರಿಗಾಗಿ ಉತ್ಪಾದಿಸುತ್ತಿದ್ದೇವೆ. ಹೇಗೆ ಉತ್ಪಾದಿಸುತ್ತಿದ್ದೇವೆ ಎಂಬುದು ಸ್ಪಷ್ಟವಾಗಿಲ್ಲ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ವೀರೇಶ ಬಡಿಗೇರ, ‘ಹಳೆಗನ್ನಡ ಓದುವ ಮತ್ತು ಹಸ್ತಪ್ರತಿಗಳ ಗ್ರಂಥ ಸಂಪಾದನೆಯನ್ನು ಬೇರೆ ಬಗೆಯಲ್ಲಿ ಅನುಸಂಧಾನ ಮಾಡಬೇಕಾದ ಸವಾಲುಗಳು ನಮ್ಮ ಮುಂದಿವೆ’ ಎಂದರು.

ಪ್ರಾಧ್ಯಾಪಕರಾದ ಮನ್ವಾಚಾರ್‌, ಗೋವಿಂದರಾಜು, ಚಿನ್ನಸ್ವಾಮಿ ಸೋಸಲೆ, ಎಫ್‌.ಟಿ. ಹಳ್ಳಿಕೇರಿ, ಕೆ. ರವೀಂದ್ರನಾಥ, ಟಿ.ಪಿ. ವಿಜಯ್‌, ವಿಠ್ಠಲರಾವ್‌ ಟಿ. ಗಾಯಕವಾಡ, ಸಂಶೋಧನಾ ವಿದ್ಯಾರ್ಥಿಗಳಾದ ಹನುಮಪ್ಪ, ವಿಶ್ವನಾಥ ಪತ್ತಾರ, ಸತೀಶ್‌, ಸಾವಿತ್ರಿ, ಪ್ರವೀಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.