ADVERTISEMENT

ನನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲಾಗದು: ಜೋಶಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:28 IST
Last Updated 21 ಜೂನ್ 2025, 14:28 IST
ಮಹೇಶ ಜೋಶಿ
ಮಹೇಶ ಜೋಶಿ   

ಬಳ್ಳಾರಿ: ‘ನನ್ನನ್ನು ಟೀಕಿಸುವವರಿಗೆ ಆಡಳಿತಾತ್ಮಕ, ಕಾನೂನಾತ್ಮಕ ಜ್ಞಾನವಿಲ್ಲ. ಚುನಾಯಿತ ಪ್ರತಿನಿಧಿಯಾದ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಲಾಗದು. ಅಮಾನತು ಕೂಡ ಮಾಡಲಾಗದು. ದಿಢೀರ್‌ನೇ ಆಡಳಿತಾಧಿಕಾರಿ ನೇಮಕಾತಿ ಆಗದು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದರು.  

‘ಚುನಾವಣೆಯಲ್ಲಿ ಸೋಲಿಸಲು ಆಗದೇ, ನನ್ನನ್ನು ವಿನಾಕಾರಣ ಟೀಕಿಸುತ್ತಾರೆ. ಪರಿಷತ್ತಿನ ಅಧ್ಯಕ್ಷನಾಗಿ ಅಲ್ಲದೇ ವೈಯಕ್ತಿಕವಾಗಿಯೂ ಚಾರಿತ್ರ್ಯ ಹರಣ ಮಾಡುತ್ತಾರೆ’ ಎಂದು ಅವರು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ವಿರುದ್ಧ ಆರೋಪಿಸುವವರು ಗಾಜಿನ ಮನೆಯಲ್ಲಿ ಕೂತಿದ್ದಾರೆ. ಯಾವ ಸಂಸ್ಥೆಯು ನನ್ನ ಅಕ್ರಮಗಳನ್ನು ಬೊಟ್ಟು ಮಾಡಿದೆ? ಯಾವ ಆರೋಪ ಸಾಬೀತಾಗಿದೆ? ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದರು. 

ADVERTISEMENT

‘ನೆನಗೆ ನೀಡಿದ್ದ ಸಚಿವ ಸ್ಥಾನ ಹಿಂಪಡೆದಿದ್ದು ಸರಿಯಲ್ಲ. ಅದು ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಅಪಮಾನಿಸಿದಂತೆ. ಸ್ಥಾನಮಾನ ಹಿಂಪಡೆಯುವಾಗ ನನಗೆ ‌ಮಾಹಿತಿ ನೀಡಿಲ್ಲ. ಆರ್‌ಟಿಐ ಅಡಿಯಲ್ಲಿ ಕಾರಣ ಕೇಳಿದರೆ ಉತ್ತರದಲ್ಲಿ ಕಾರಣ ಉಲ್ಲೇಖಿಸಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಹೀಗೆ ಮಾಡಬಾರದಿತ್ತು’ ಎಂದರು.

‘ಇದೇ 29ರಂದು ಸಂಡೂರಿನಲ್ಲಿ ನಡೆಯುವ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಘೋಷಿಸಲಾಗುವುದು. ಅಂದು ಶ್ವೇತಪತ್ರ ಹೊರಡಿಸಲಾಗುವುದು’ ಎಂದು ಮಹೇಶ ಜೋಶಿ ತಿಳಿಸಿದರು.

ಹಿಂದಿನ ಎರಡು ಸಮ್ಮೇಳನಗಳ ಲೆಕ್ಕಪತ್ರ ಪರಿಶೋಧನೆ ಮೂರು ಹಂತಗಳಲ್ಲಿ ನಡೆದಿದೆ. ಅದರಿಂದ ವಿಳಂಬವಾಗಿದೆ.ಎಲ್ಲಾ ಲೆಕ್ಕವನ್ನು ಕೊಡಬೇಕಾದದ್ದು ಜಿಲ್ಲಾಡಳಿತ ಹೊರತು ಪರಿಷತ್ತು ಅಲ್ಲ.
ಮಹೇಶ ಜೋಶಿ ಅಧ್ಯಕ್ಷ ಕನ್ನಡ ಸಾಹಿತ್ಯ ಪರಿಷತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.