ADVERTISEMENT

ಹೂವಿನಹಡಗಲಿ |ಕುರ್ಚಿ ಕದನ ಬಿಟ್ಟು ರೈತರ ಸಮಸ್ಯೆಗೆ ಸ್ಪಂದಿಸಿ: ಬಿಜೆಪಿ ಪ್ರತಿಭಟನೆ

ಮೆಕ್ಕೆಜೋಳ, ಭತ್ತ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:42 IST
Last Updated 28 ನವೆಂಬರ್ 2025, 5:42 IST
ಹೂವಿನಹಡಗಲಿಯಲ್ಲಿ ಶಾಸಕ ಕೃಷ್ಣನಾಯ್ಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು
ಹೂವಿನಹಡಗಲಿಯಲ್ಲಿ ಶಾಸಕ ಕೃಷ್ಣನಾಯ್ಕ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು   

ಹೂವಿನಹಡಗಲಿ: ಮಾರುಕಟ್ಟೆಯಲ್ಲಿ ಮೆಕ್ಕೆಜೋಳ, ಭತ್ತ, ಈರುಳ್ಳಿ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ನಡೆಸುವವರು ಕುರ್ಚಿ ಕದನ ಬಿಟ್ಟು ಅನ್ನದಾತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಶಾಸಕ ಕೃಷ್ಣನಾಯ್ಕ ಆಗ್ರಹಿಸಿದರು.

ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಬಿಜೆಪಿ ರೈತ ಮೋರ್ಚಾ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

‘ಮೆಕ್ಕೆಜೋಳ ಬೆಲೆ ₹1600 ಗಳಿಗೆ ಕುಸಿದಿರುವುದರಿಂದ ಬೆಳೆ ನಿರ್ವಹಣೆಗೆ ಮಾಡಿದ ಖರ್ಚು ಹಿಂತಿರುಗದಂತಾಗಿದೆ. ಕಳೆದ ತಿಂಗಳು ಮಳೆಯಿಂದ ಅಪಾರ ಫಸಲು ನಾಶವಾಗಿದ್ದರೂ ಬೆಳೆ ನಷ್ಟ ಪರಿಹಾರ ನೀಡಿಲ್ಲ. ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದು ಕಿಡಿಕಾರಿದರು.

ADVERTISEMENT

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವರೆಡ್ಡಿ ಮಾತನಾಡಿ, ರಾಜ್ಯದಾದ್ಯಂತ ರೈತರು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸುತ್ತಿದ್ದರೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಶಾಸಕರ ಖರೀದಿ ಕೇಂದ್ರ ತೆರೆದಿದ್ದಾರೆ. ಮೆಕ್ಕೆಜೋಳ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರದ ₹2400 ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ₹600 ಪ್ರೋತ್ಸಾಹ ಧನ ನೀಡಿ, ಪ್ರತಿ ಕ್ವಿಂಟಲ್‌ಗೆ ₹3000 ಗಳಂತೆ ಸರ್ಕಾರ ಖರೀದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಈಟಿ ಲಿಂಗರಾಜ, ಕೆ.ಪುತ್ರೇಶ ಮಾತನಾಡಿದರು. ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಹಣ್ಣಿ ಶಶಿಧರ, ಕೆ.ಬಿ.ವೀರಭದ್ರಪ್ಪ, ಎನ್.ಕೋಟೆಪ್ಪ, ಎಸ್.ಬಸವರಾಜ, ಶಿವನಗೌಡ, ಪುನೀತ್ ದೊಡ್ಡಮನಿ, ಸಿರಾಜ್ ಬಾವಿಹಳ್ಳಿ, ನೀಲಪ್ಪ, ಪಿ.ವಿ.ಬಸವರಾಜ, ವಿನೋದ ಜಾಡರ್, ಶಿವಪುರ ಸುರೇಶ, ಎನ್.ಎಂ.ಸಿದ್ದೇಶ, ವಿಶ್ವನಾಥ ಮಂತ್ರೋಡಿ, ಲಂಕೇಶ್ವರನಾಯ್ಕ ಇತರರು ಭಾಗವಹಿಸಿದ್ದರು.

ಬಿಜೆಪಿ ಕಾರ್ಯಕರ್ತರು ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.