ಸಂಡೂರು: ತಾಲ್ಲೂಕಿನ ದರೋಜಿ–ತೋರಣಗಲ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ರೈಲ್ವೆ ಮೇಲ್ಮಟ್ಟದ ಸೇತುವೆಯ ಕಾಮಗಾರಿಯು ತ್ವರಿತವಾಗಿ ಆರಂಭವಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿತ್ಯದ ಸಂಚಾರಕ್ಕಾಗಿ ಪರದಾಡುವಂತಾಗಿದೆ.
ರೈಲ್ವೆ ಮೇಲ್ಮಟ್ಟದ ಸೇತುವೆ ಕಾಮಗಾರಿ ಆರಂಭಕ್ಕೆ ಅಧಿಕಾರಿ, ಜನ ಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯು ಎದ್ದು ಕಾಣತ್ತಿದ್ದು, ಸಾರ್ವಜನಿಕರು ಹಲವಾರು ದಶಕಗಳಿಂದ ಸಂಚಾರಕ್ಕೆ ನರಕಯಾತನೆ ಅನುಭವಿಸುತ್ತಿದ್ದಾರೆ. ನೂತನ ಸೇತುವೆ ಕಾಮಗಾರಿ ಆರಂಭಕ್ಕೆ ಸೂಕ್ತ ಕ್ರವಹಿಸದ ಜಿಲ್ಲಾಡಳಿತ, ಜನ ಪ್ರತಿನಿಧಿಗಳ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ.
ತೋರಣಗಲ್ಲು ಹೋಬಳಿಯ ಹೊಸದರೋಜಿ, ಹಳೆದರೋಜಿ, ಹೊಸಮಾದಾಪುರ, ಹಳೆಮಾದಾಪುರ ಗ್ರಾಮಗಳು ಸೇರಿದಂತೆ ಕಂಪ್ಲಿ, ಕುರುಗೋಡು ತಾಲ್ಲೂಕುಗಳ ಹಲವಾರು ಹಳ್ಳಿಗಳ ಜನರು, ನೂರಾರು ಕಾರ್ಮಿಕರು ನಿತ್ಯದ ಸಂಚಾರಕ್ಕಾಗಿ ಕಿರಿದಾದ ರೈಲ್ವೆ ಸೇತುವೆಯ ರಸ್ತೆಯನ್ನೆ ಅವಲಂಬಿಸಿದ್ದಾರೆ.
ದರೋಜಿ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತಾಪಿ ಜನರು, ಸಾರ್ವಜನಿಕರು ಸರ್ಕಾರಿ, ಇತರೆ ಖಾಸಗಿ ಕೆಲಸಗಳಿಗಾಗಿ ಕುಡತಿನಿ ಮಾರ್ಗವಾಗಿ ತೋರಣಗಲ್ಲು ಹೋಬಳಿ ಕೇಂದ್ರಕ್ಕೆ 20ಕಿ.ಮೀ, ಸಂಡೂರು ತಾಲ್ಲೂಕು ಕೇಂದ್ರಕ್ಕೆ ತೆರಳಲು ಸುಮಾರು 40ಕಿ.ಮೀ. ವ್ಯಾಪ್ತಿಯಲ್ಲಿ ಸುತ್ತುವರೆದು ತೆರಳುತ್ತಿದ್ದು ಅಧಿಕ ಸಮಯ, ಹೆಚ್ಚಿನ ಹಣದ ವ್ಯಯಿಸುವುದು ಸಾಮಾನ್ಯವಾಗಿದೆ.
ದರೋಜಿ ಗ್ರಾಮ ಸೇರಿದಂತೆ ಕಂಪ್ಲಿ, ಕುರುಗೋಡು ತಾಲ್ಲೂಕುಗಳ ಹಲವಾರು ಹಳ್ಳಿಗಳ ನೂರಾರು ಕಾರ್ಮಿಕರು ಜಿಂದಾಲ್ ಕಾರ್ಖಾನೆ, ಇತರೆ ಸಣ್ಣ, ಬೃಹತ್ ಪ್ರಮಾಣದ ಕೈಗಾರಿಕೆಳ ನಿತ್ಯದ ಕೆಲಸಕ್ಕಾಗಿ ತೆರಳಲು ದರೋಜಿ ಕೆರೆಯ ಪಕ್ಕದಲ್ಲಿನ ಕಿರಿದಾದ ರೈಲ್ವೆ ಸೇತುವೆಯ ಮೂಲಕ ಪ್ರಾಣ ಭಯದಲ್ಲೆ ರಾತ್ರಿ ಹಗಲು ಸಂಚರಿಸುತ್ತಿದ್ದಾರೆ.
ಈ ಭಾಗದ ಹಳ್ಳಿಗಳ ಸಾರ್ವಜನಿಕರು ಸೇತುವೆ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸುವಂತೆ ಒತ್ತಾಯಿಸಿ ಜಿಲ್ಲೆಯ ಸಂಸದ ಇ.ತುಕಾರಾಂ, ಸಂಡೂರಿನ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ಪರಿಣಾಮ ಅವರು ನೂತನ ರೈಲ್ವೆ ಸೇತುವೆಯ ಕಾಮಗಾರಿಯ ಸ್ಥಳಕ್ಕೆ ಕಂದಾಯ ಹುಬ್ಬಳಿಯ ಅಧಿಕಾರಿಗಳ ಸಮ್ಮುಖದಲ್ಲಿ ಆಗಮಿಸಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಅಧಿಕಾರಿಗಳಿಗೆ ಕಾಮಗಾರಿ ಆರಂಭಿಸುವಂತೆ ಸೂಚಿಸಿದರೂ ಪ್ರಯೋಜನಾಗಿಲ್ಲ.
ಕಳೆದ ವರ್ಷ ಹುಬ್ಬಳಿಯ ನೈರುತ್ಯ ರೈಲ್ವೆ ವಿಭಾಗದ ಎಂಜಿನಿಯರ್, ವ್ಯವಸ್ಥಾಪಕ ಅಧಿಕಾರಿಗಳು, ಸಂಡೂರಿನ ತಹಶೀಲ್ದಾರ್ ಜಿ.ಅನಿಲ್‍ಕುಮಾರ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತಂಡವು ನೂತನ ರೈಲ್ವೆ ಸೇತುವೆಯ ಸ್ಥಳಕ್ಕೆ ಆಗಮಿಸಿ, ಜಂಟಿ ಸರ್ವೆ ನಡೆಸಿ, ಸೇತುವೆಯ ಕಾಮಗಾರಿಯ ಆರಂಭದ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ, ಕೆಲಸ ವಿಳಂಬವಾಗಿದ್ದರಿಂದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಜಿಲ್ಲಾ ಖನಿಜ ನಿಧಿ ಅನುದಾನದಲ್ಲಿ ₹2.50ಕೋಟಿ ವೆಚ್ಚದಲ್ಲಿ ಈಗಾಗಲೇ ದರೋಜಿ ಗ್ರಾಮದಿಂದ ತೋರಣಗಲ್ಲು ಗ್ರಾಮಕ್ಕೆ ಕೆರೆ, ರೈಲ್ವೆ ಹಳಿಯ ಪಕ್ಕದಲ್ಲಿ 6ಕಿ.ಮೀ. ನೂತನ ಡಾಂಬಾರ್ ರಸ್ತೆಯ ಕಾಮಗಾರಿ ಮುಗಿದಿದ್ದು, ಜನರು ನೂತನ ರೈಲ್ವೆ ಮೇಲ್ಮಟ್ಟದ ಸೇತುವೆಯ ಕಾಮಗಾರಿಯು ಯಾವಾಗ ಆರಂಭವಾಗುತ್ತದೆ ಎಂದು ಸುಮಾರು ಎರಡು ವರ್ಷಗಳಿಂದ ಕಾತರದಿಂದ ಕಾಯುತ್ತಿದ್ದಾರೆ.
ದರೋಜಿ – ತೋರಣಗಲ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ರೈಲ್ವೆ ಮೇಲ್ಮಟ್ಟದ ಸೇತುವೆ ನಿರ್ಮಾಣವಾದರೇ ಈ ಭಾಗದ ಜನರಿಗೆ ಕಾರ್ಮಿಕರಿಗೆ ಬಹಳ ಅನುಕೂಲವಾಗುತ್ತದೆ. ಸಂಡೂರು ಕ್ಷೇತ್ರದ ಜನ ಪ್ರತಿನಿಧಿಗಳು ಜಿಲ್ಲಾಡಳಿತವು ಶೀಘ್ರವಾಗಿ ರೈಲ್ವೆ ಸೇತುವೆಯ ಕಾಮಗಾರಿ ಆರಂಭಿಸಬೇಕು.ನಾಗರಾಜ ಬೋವಿ ದಲಿತ ಪ್ಯಾಂಥರ್ಸ್ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸದರೋಜಿ ಗ್ರಾಮ
ದರೋಜಿ–ತೋರಣಗಲ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ರೈಲ್ವೆ ಮೇಲ್ಮಟ್ಟದ ನೂತನ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮದಿಂದ ₹149ಕೋಟಿ ಅನುದಾನ ಬಿಡುಗಡೆಯಾಗಿದ್ದು ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು.ಎಂ.ಕೊಟ್ರೇಶ್ ಎಇಇ ಲೋಕೋಪಯೋಗಿ ಇಲಾಖೆ ಸಂಡೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.