ADVERTISEMENT

‘ಶಾಂತಿಯುತವಾಗಿ ದಸರಾ ಆಚರಿಸಿ’

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 14:12 IST
Last Updated 4 ಅಕ್ಟೋಬರ್ 2019, 14:12 IST
ಹೊಸಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದ ಶಾಂತಿ ಸಭೆ ಉದ್ದೇಶಿಸಿ ಡಿ.ವೈ.ಎಸ್ಪಿ. ವಿ. ರಘುಕುಮಾರ ಮಾತನಾಡಿದರು–ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದ ಶಾಂತಿ ಸಭೆ ಉದ್ದೇಶಿಸಿ ಡಿ.ವೈ.ಎಸ್ಪಿ. ವಿ. ರಘುಕುಮಾರ ಮಾತನಾಡಿದರು–ಪ್ರಜಾವಾಣಿ ಚಿತ್ರ   

ಹೊಸಪೇಟೆ: ‘ದಸರಾ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು. ಶಾಂತಿ ಕದಡಿದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು’ ಎಂದು ಡಿ.ವೈ.ಎಸ್ಪಿ. ವಿ. ರಘುಕುಮಾರ ಎಚ್ಚರಿಕೆ ನೀಡಿದರು.

ದಸರಾ ಹಬ್ಬದ ಪ್ರಯುಕ್ತ ಶುಕ್ರವಾರ ಸಂಜೆ ಇಲ್ಲಿನ ಪಟ್ಟಣ ಠಾಣೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ‘ದಸರಾ ಹಬ್ಬದ ಪ್ರಯುಕ್ತ ನಡೆಯುವ ದೇವರ ಮೆರವಣಿಗೆಗೆ ಮಾರ್ಗ ಬದಲಿಸಲಾಗಿದೆ ಎಂಬುದು ಸುಳ್ಳು. ಈ ಹಿಂದಿನಂತೆ ಮೆರವಣಿಗೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

‘ಮೆರವಣಿಗೆ ದಿನ ಯಾರೂ ಕೂಡ ವೀಲಿಂಗ್‌ ಮಾಡುವಂತಿಲ್ಲ. ಸೈಲೆನ್ಸರ್‌ ತೆಗೆದು ವಾಹನ ಚಲಾಯಿಸುವಂತಿಲ್ಲ. ಪಲ್ಲಕ್ಕಿಗಳನ್ನು ಹೊತ್ತುಕೊಂಡು ಮನಬಂದಂತೆ ನುಗ್ಗುವಂತಿಲ್ಲ. ನಮ್ಮ ಭಕ್ತಿ, ಸಂಭ್ರಮ ಬೇರೆಯವರಿಗೆ ಕಿರಿಕಿರಿ ಉಂಟು ಮಾಡಬಾರದು. ಹಾಗೊಂದು ವೇಳೆ ಯಾರಾದರೂ ಕಾನೂನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

‘ದೇವರ ಪಲ್ಲಕ್ಕಿ ಹೊರುವವರಿಗೆ ಪೊಲೀಸ್‌ ಇಲಾಖೆಯಿಂದ ಬ್ಯಾಡ್ಜ್‌ ನೀಡಲಾಗುವುದು. ಬನ್ನಿ ಮರದ ಹತ್ತಿರ ಪ್ರದಕ್ಷಿಣೆ ಹಾಕಲು ಐದು ಜನ ಮುಖಂಡರಿಗೆ ಅವಕಾಶ ಕಲ್ಪಿಸಲಾಗುವುದು. ಮೆರವಣಿಗೆ ಹಾದು ಹೋಗುವ ಮಾರ್ಗಗಳಲ್ಲಿ ಗುಂಡಿ ಮುಚ್ಚಲಾಗುವುದು. ನಿರಂತರವಾಗಿ ವಿದ್ಯುತ್‌ ಪೂರೈಸಲಾಗುವುದು. ಜತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ನಾಯಕ ಸಮಾಜದ ಮುಖಂಡ ಗುಜ್ಜಲ್‌ ಶಿವರಾಮಪ್ಪ, ಮುಸ್ಲಿಂ ಸಮಾಜದ ಮುಖಂಡ ಮೊಹಮ್ಮದ್‌ ಇಮಾಮ್‌ ನಿಯಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.