ADVERTISEMENT

ಹಂಪಿ ವಿರೂಪಾಕ್ಷೇಶ್ವರನ ದರ್ಶನ: ವಾಕ್‌ ಮಾಡಿದ ಉಪಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 10:39 IST
Last Updated 10 ನವೆಂಬರ್ 2020, 10:39 IST
ಮಂಗಳವಾರ ಹಂಪಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ವಿರೂಪಾಕ್ಷೇಶ್ವರ ದೇವಸ್ಥಾನದ ‘ಲಕ್ಷ್ಮಿ’ ಹೆಸರಿನ ಆನೆಯಿಂದ ಆಶೀರ್ವಾದ ಪಡೆದರು. ಅರಣ್ಯ ಸಚಿವ ಆನಂದ್‌ ಸಿಂಗ್‌, ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಇದ್ದಾರೆ
ಮಂಗಳವಾರ ಹಂಪಿಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ವಿರೂಪಾಕ್ಷೇಶ್ವರ ದೇವಸ್ಥಾನದ ‘ಲಕ್ಷ್ಮಿ’ ಹೆಸರಿನ ಆನೆಯಿಂದ ಆಶೀರ್ವಾದ ಪಡೆದರು. ಅರಣ್ಯ ಸಚಿವ ಆನಂದ್‌ ಸಿಂಗ್‌, ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಇದ್ದಾರೆ   

ಕಮಲಾಪುರ (ಹೊಸಪೇಟೆ ತಾಲ್ಲೂಕು): ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಮಂಗಳವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸರದಲ್ಲಿ ನಸುಕಿನ ಜಾವ ವಾಕ್‌ ಮಾಡಿದರು.

ನುಡಿಹಬ್ಬದಲ್ಲಿ ಪಾಲ್ಗೊಳ್ಳಲು ಅಶ್ವತ್ಥನಾರಾಯಣ ಅವರು ಸೋಮವಾರ ಸಂಜೆಯೇ ವಿಶ್ವವಿದ್ಯಾಲಯಕ್ಕೆ ಬಂದು ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿದ್ದರು. ನಸುಕಿನ ಜಾವ ಐದು ಗಂಟೆಗೆ ವಿಶ್ವವಿದ್ಯಾಲಯದಲ್ಲಿ ವಾಕ್‌ ಮಾಡಿದರು. ವಾಕ್‌ ಮಾಡುತ್ತಲೇ ವಿವಿಧ ವಿಭಾಗಗಳನ್ನು ವೀಕ್ಷಿಸಿದರು. ವಿಶ್ವವಿದ್ಯಾಲಯದ ಹಚ್ಚ ಹಸಿರಿನ ಪರಿಸರ, ಪ್ರಶಾಂತ ವಾತಾವರಣ ನೋಡಿ ಆನಂದಿಸಿದರು. ಅವರಿಗೆ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಸಾಥ್‌ ನೀಡಿದರು.

ಬಳಿಕ ಅವರು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ವಿರೂಪಾಕ್ಷನಿಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಪಂಪಾಂಬಿಕೆ ದೇವಿ, ಭುವನೇಶ್ವರಿ ದೇವಿ ದರ್ಶನ ಪಡೆದು, ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರನ್ನು ಕಂಡು ದರ್ಶನ ಪಡೆದರು. ಅನಂತರ ದೇವಸ್ಥಾನದ ಆನೆ ‘ಲಕ್ಷ್ಮಿ’ಯಿಂದ ಆಶೀರ್ವಾದ ಪಡೆದರು.

ADVERTISEMENT

ಅಶ್ವತ್ಥನಾರಾಯಣ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಸಾಥ್‌ ನೀಡಿದರು. ಸಂಕ್ಷಿಪ್ತವಾಗಿ ಹಂಪಿ, ವಿರೂಪಾಕ್ಷೇಶ್ವರ ದೇವಸ್ಥಾನದ ಕುರಿತು ವಿವರಿಸಿದರು. ಅನಂತರ ಆನಂದ್‌ ಸಿಂಗ್‌ ಅವರ ಮನೆಗೆ ತೆರಳಿ ಉಪಾಹಾರ ಸೇವಿಸಿದರು. ಅಲ್ಲಿಂದ ನೇರವಾಗಿ ವಿಶ್ವವಿದ್ಯಾಲಯಕ್ಕೆ ಬಂದು ಸಂಗೀತ ಮತ್ತು ನೃತ್ಯ ವಿಭಾಗದ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ತುರ್ತು ಕೆಲಸದ ನಿಮಿತ್ತ ಆನಂದ್‌ ಸಿಂಗ್‌ ಅವರು ಹೆಲಿಕ್ಯಾಪ್ಟರ್‌ ಮೂಲಕ ಬೆಂಗಳೂರಿಗೆ ಪಯಣ ಬೆಳೆಸಿದರು. ಅಶ್ವತ್ಥನಾರಾಯಣ ಅವರು ನುಡಿಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಕೊನೆಯ ವರೆಗೆ ಇದ್ದರು. ಶಾಸಕ ಜಿ. ಸೋಮಶೇಖರ್‌ ರೆಡ್ಡಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್‌, ಹೆಚ್ಚುವರಿ ಎಸ್ಪಿ ಎನ್‌. ಲಾವಣ್ಯ, ಡಿವೈಎಸ್ಪಿ ಕಾಶಿಗೌಡ, ಇನ್‌ಸ್ಪೆಕ್ಟರ್‌ ವೈ. ಶಶಿಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.