ADVERTISEMENT

ಪಡಿತರ ಚೀಟಿ ವಿತರಣೆ ವಿಳಂಬ: ಕರ್ತವ್ಯಲೋಪವೇ ಕಾರಣ!

ಆಹಾರ ಇಲಾಖೆ ಉಪನಿರ್ದೇಶಕ ಕೆ.ರಾಮೇಶ್ವರಪ್ಪ ಆಕ್ಷೇಪ, ಗಡುವಿನೊಳಗೆ ವಿಲೇವಾರಿ ಮಾಡಲು ಸೂಚನೆ

ಕೆ.ನರಸಿಂಹ ಮೂರ್ತಿ
Published 2 ಆಗಸ್ಟ್ 2019, 12:10 IST
Last Updated 2 ಆಗಸ್ಟ್ 2019, 12:10 IST
ಕೆ.ರಾಮೇಶ್ವರಪ್ಪ
ಕೆ.ರಾಮೇಶ್ವರಪ್ಪ   

ಬಳ್ಳಾರಿ: ಹೊಸಪಡಿತರ ಚೀಟಿಗಾಗಿ ಜಿಲ್ಲೆಯ ಜನ ಸಲ್ಲಿಸಿದ ಸಾವಿರಾರು ಅರ್ಜಿಗಳನ್ನು ಒಂದೂವರೆ ವರ್ಷದಿಂದ ಬಾಕಿ ಉಳಿಸಿಕೊಂಡಿರುವುದಕ್ಕೆ ಆಹಾರ ಶಿರಸ್ತೇದಾರರು ಮತ್ತು ಆಹಾರ ನಿರೀಕ್ಷಕರ ವೈಫಲ್ಯ ಮತ್ತು ಕರ್ತವ್ಯಲೋಪ ಹೊರತುಪಡಿಸಿ ಬೇರೆ ಕಾರಣಗಳೇ ಇಲ್ಲ!

–ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿರ್ದೇಶಕ ಕೆ.ರಾಮೇಶ್ವರಪ್ಪ ಅವರು ಜಿಲ್ಲೆಯ ಎಲ್ಲ ತಹಶೀಲ್ದಾರ್, ಇಲಾಖೆಯ ಸಹಾಯಕ ನಿರ್ದೇಶಕರಿಗೆ ಜುಲೈ 24ರಂದು ಬರೆದಿರುವ ಪತ್ರದಲ್ಲಿ ವ್ಯಕ್ತಪಡಿಸಿರುವ ಆಕ್ಷೇಪ ಇದು.

‘ಹೊಸ ಪಡಿತರ ಚೀಟಿಗಾಗಿ 2018ರಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಒಂದೈವರೆ ವರ್ಷ ತುಂಬಿದೆ. 2019ರಲ್ಲಿ ಸಲ್ಲಿಸಿದ ಅರ್ಜಿಗಳಿಗೆ ಆರು ತಿಂಗಳು ತುಂಬಿದೆ. ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿಗಳ ಕೋರಿಕೆ ಅರ್ಜಿಗಳನ್ನು ವಿಲೇವಾರಿ ಮಾಡದಿರುವುದು ಆಕ್ಷೇಪಣೀಯ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಹರಪನಹಳ್ಳಿ ಹಿಂದೆ: ‘ಜಿಲ್ಲೆಗೆ ಮರುಸೇರ್ಪಡೆಗೊಂಡಿರುವ ಹರಪನಹಳ್ಳಿ ತಾಲ್ಲೂಕು 2018ರ ಅರ್ಜಿಗಳ ವಿಲೇವಾರಿ ವಿಷಯದಲ್ಲಿ ಇತರೆ ಜಿಲ್ಲೆಗಳಿಗಿಂತ ಹಿಂದೆ ಉಳಿದಿದೆ. ಅಲ್ಲಿ ಶೇ 4ರಷ್ಟು ಮಾತ್ರ ಪ್ರಗತಿಯಾಗಿದೆ. ಹೊಸಪೇಟೆ ಶೇ 35, ಕೂಡ್ಲಿಗಿ ಶೇ 39,ಬಳ್ಳಾರಿ ಗ್ರಾಮೀಣ ಶೇ 43ರಷ್ಟು ಸಾಧನೆಯನ್ನಷ್ಟೇ ಮಾಡಿದೆ’ ಎಂದು ಆಕ್ಷೇಪಿಸಿದ್ದಾರೆ.

ಪ್ರಸಕ್ತ ವರ್ಷ: ‘2019ರಲ್ಲಿ ಅರ್ಜಿಗಳ ವಿಲೇವಾರಿ ಶೇ 9ರಷ್ಟ ಮಾತ್ರ ಆಗಿದೆ’ ಎಂದು ಗುರುತಿಸಿರುವ ಅವರು, ತಾಲ್ಲೂಕುವಾರು ಸಲ್ಲಿಕೆ ಆಗಿರುವ ಅರ್ಜಿಗಳ ವಿಲೇವಾರಿಗೆ ಗಡುವನ್ನೂ ನೀಡಿದ್ದಾರೆ. 2018ರ ಅರ್ಜಿಗಳನ್ನು ವಿಲೇವಾರಿ ಮಾಡಲು ಜುಲೈ 30ರವರೆಗೆ ಗಡುವು ಹಾಗೂ 2019ರ ಅರ್ಜಿಗಳನ್ನು ವಿಲೇವಾರಿ ಮಾಡಲು ಆಗಸ್ಟ್‌10ರ ವರೆಗೆ ಗಡುವನ್ನು ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಅರ್ಜಿಗಳ ವಿಲೇವಾರಿ ವಿಳಂಬವಾಗಲು ಅರ್ಜಿದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸದೇ ಇರುವುದೂ ಒಂದು ಕಾರಣ, ಅದರಲ್ಲೂ ಆಧಾರ್‌ ಕಾರ್ಡ್ ದೊರಕದೇ ಇರುವುದು ಮುಖ್ಯ ಸಮಸ್ಯೆ. ಅಂಥವನ್ನು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಅರ್ಜಿಗಳ ವಿಲೇವಾರಿ ಮುಗಿಯಬೇಕಿತ್ತು. ಈಗ ಆ ಕೆಲಸವನ್ನು ಚುರುಕಾಗಿ ಮುಗಿಸುತ್ತೇವೆ’ ಎಂದು ಹೇಳಿದರು.

15 ದಿನದಲ್ಲಿ 1,242 ಅರ್ಜಿ ವಿಲೇವಾರಿ!

ಒಂದೂವರೆ ವರ್ಷದಲ್ಲಿ ಸಾವಿರಾರು ಅರ್ಜಿಗಳ ವಿಲೇವಾರಿ ಬಾಕಿ ಉಳಿದಿರುವ ಸನ್ನಿವೇಶದಲ್ಲೇ, ರಾಮೇಶ್ವರಪ್ಪ ಅವರು ಉಪನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಜುಲೈ 15ರಿಂದ 31ರವರೆಗೆ 1,242 ಅರ್ಜಿಗಳನ್ನು ವಿಲೇವಾರಿ ಮಾಡಿರುವುದು ವಿಶೇಷ.

ಜಿಲ್ಲಾ ಕೇಂದ್ರ ಬಳ್ಳಾರಿ ನಗರ, ಸಂಡೂರು, ಹಡಗಲಿ, ಹಗರಿಬೊಮ್ಮನಹಳ್ಳಿಯಲ್ಲಿ ಆಹಾರ ಅದಾಲತ್‌ ನಡೆಸಿದ ಅವರು, ಅರ್ಜಿಗಳನ್ನು ವಿಲೇವಾರಿ ಮಾಡಿ ಸ್ಥಳದಲ್ಲೇ ಹಲವರಿಗೆ ಪಡಿತರ ಚೀಟಿಗಳನ್ನು ವಿತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.