
ಬಳ್ಳಾರಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭಯೋತ್ಪಾದಕ ದಾಳಿಯ ಹಿಂದಿರುವ ಇಸ್ಲಾಮಿಕ್ ಸಂಸ್ಥೆ ಹಾಗೂ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
‘ಸಂಸತ್ ಭವನ, ಮುಂಬೈ ದಾಳಿ, ಉರಿ, ಪುಲ್ವಾಮಾ ಹಾಗೂ ಧರ್ಮದ ಗುರುತು ಖಾತ್ರಿ ಮಾಡಿಕೊಂಡು ಪಹಲ್‌ಗಾಮ್‌ನಲ್ಲಿ ಅಮಾಯಕ ಹಿಂದೂ ಪ್ರವಾಸಿಗರ ಮೇಲಿನ ದಾಳಿಯಿಂದ ದೇಶದ ಜನರು ಆತಂಕಗೊಂಡಿದ್ದಾರೆ. ಈ ದಾಳಿಗಳ ಆತಂಕ ಮಾಸುವ ಮುನ್ನವೇ ದೆಹಲಿಯ ಕೆಂಪುಕೋಟೆಯ ಬಳಿ ಭಯೋತ್ಪಾದಕ ಸಂಘಟನೆಯ ದುಷ್ಕರ್ಮಿಗಳು ಮತ್ತೊಂದು ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ಭಾರತದಲ್ಲಿ ಭಯೋತ್ಪಾದಕ ಕೃತ್ಯ ಎಸಗುವವರನ್ನು ಹುಡುಕಾಡಿ ಬೇಟೆಯಾಡಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
‘ದೇಶದ ಇತಿಹಾಸದುದ್ದಕ್ಕೂ ನಡೆದಿರುವ ದಾಳಿಗಳನ್ನು ನೋಡಿದರೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರ ಕಂಡು ಬರುತ್ತಿದೆ. ಇದಕ್ಕಾಗಿ ಇಸ್ಲಾಂ ಮೂಲಭೂತವಾದಿಗಳು ಬೇರೆ ಬೇರೆ ಹೆಸರುಗಳ ಮೂಲಕ ದೇಶದ ನಾನಾ ಕಡೆ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿವೆ. ದೆಹಲಿಯ ಕೆಂಪುಕೋಟೆ ಬಳಿಯ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಆತಂಕಕಾರಿ ಸಂಗತಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಧಾರ್ಮಿಕತೆಯ ಸೋಗಿನಲ್ಲಿ ದೇಶ ಒಡೆಯುವ ವಿಚಾರ ಬಿತ್ತುವ ಮದರಸಾ ವ್ಯವಸ್ಥೆಯನ್ನು ಭಾರತದಲ್ಲಿ ನಿಷೇಧಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಉತ್ತರ ಪ್ರಾಂತ ಸದಸ್ಯ ಶ್ರೀರಾಮಲು, ಮುಲ್ಲಂಗಿ ಕಿಶೋರ್ ಕುಮಾರ್, ಎರಿಸ್ವಾಮಿ, ಭರತ್ ಸೋನಿ, ಮನೋಜ್ ಕುಮಾರ್, ಗೋವಿಂದ ನಾಯಕ, ಅಮರೇಶ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.