ಬಳ್ಳಾರಿ: ನಾಗಮೋಹನ ದಾಸ್ ಅವರ ವರದಿಯಲ್ಲಿ ವರ್ಗೀಕರಿಸಿರುವ 59 ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ಶೇ 1ರಷ್ಟು ಒಳಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ 59 ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ ನಗರದಲ್ಲಿ ಸೋಮವಾರ ಹೋರಾಟ ನಡೆಸಿತು.
ನಗರದ ಗಡಿಗಿ ಚೆನ್ನಪ್ಪ (ರಾಯಲ್) ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೊದಲಿಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಲ್ಲಿ ಧರಣಿ ಕುಳಿತ ಅಲೆಮಾರಿ ಸಮುದಾಯದ ಜನ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಎಸ್‌ಸಿಎಸ್‌ಟಿ ಅಲೆಮಾರಿ ಬುಡಕಟ್ಟು ಮಹಾಸಭಾದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ್, ‘ಇದೇ 19ರಂದು ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಪರಿಶಿಷ್ಟ ಜಾತಿಯ ಇತರ ಸಮುದಾಯದ ಮುಖಂಡರು ಇದ್ದರು. ಆದರೆ, ಅಲ್ಲಿ ನಮ್ಮ ಧ್ವನಿಯೇ ಇರಲಿಲ್ಲ. ನಮ್ಮ ಪರವಾಗಿ ಅಲ್ಲಿ ಯಾರೂ ಮಾತನಾಡಲೂ ಇಲ್ಲ. ಇಡೀ ನಾಗರಿಕ ಸಮುದಾಯವೇ ತಲೆ ತಗ್ಗಿಸುವಂಥ ನಿರ್ಣಯವನ್ನು ಆ ಸಭೆಯಲ್ಲಿ ಕೈಗೊಳ್ಳಲಾಗಿದೆ’ ಎಂದು ಆರೋಪಿಸಿದರು.
‘ನಾವು ಅಸ್ಪೃಶ್ಯ ಅಲೆಮಾರಿಗಳು. ನಮ್ಮನ್ನು ಸ್ಪೃಶ್ಯ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಹೇಗೆ ಸಾಧ್ಯ. ಸಚಿವ ಸಂಪುಟದ ನಿರ್ಧಾರ ಹಿಂಪಡೆಯಬೇಕು. ನಮ್ಮನ್ನು ಪ್ರವರ್ಗ–ಎಗೆ ಸೇರಿಸಿ ಶೇ 1ರ ಮೀಸಲಾತಿ ನೀಡಬೇಕು. ಇಲ್ಲವಾದರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟ ಮುಂದುವರಿಯಲಿದೆ’ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಲೆಮಾರಿ ಸಮುದಾಯಗಳ ಜನ ತಮ್ಮ ವೃತ್ತಿ ಸಂಬಂಧಿತ ವೇಷಗಳನ್ನು ಧರಿಸಿದ್ದರು. ಕೆಲವರು ಚಾವಟಿಯಲ್ಲಿ ಬೆನ್ನಿಗೆ ಹೊಡೆದುಕೊಳ್ಳುತ್ತಿದ್ದರೆ, ಕೆಲವರು ಭಿಕ್ಷಾ ಪಾತ್ರೆ ಹಿಡಿದು ಬೇಡುತ್ತಿದ್ದರು. ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ ಅವರಿಗೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.