ADVERTISEMENT

ಮೀಸಲು ನಿಯಮ ಉಲ್ಲಂಘನೆಅಧಿಸೂಚನೆ ರದ್ದತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 12:24 IST
Last Updated 6 ಅಕ್ಟೋಬರ್ 2021, 12:24 IST
ಕನ್ನಡ ವಿಶ್ವವಿದ್ಯಾಲಯ ಸಂರಕ್ಷಣಾ ಹೋರಾಟ ಸಮಿತಿಯ ಮುಖಂಡರು ಕುಲಪತಿ ಪ್ರೊ. ಸ.ಚಿ. ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕನ್ನಡ ವಿಶ್ವವಿದ್ಯಾಲಯ ಸಂರಕ್ಷಣಾ ಹೋರಾಟ ಸಮಿತಿಯ ಮುಖಂಡರು ಕುಲಪತಿ ಪ್ರೊ. ಸ.ಚಿ. ರಮೇಶ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ(ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮ ಉಲ್ಲಂಘನೆಯಾಗಿದ್ದು, ಅಧಿಸೂಚನೆಯನ್ನು ರದ್ದುಗೊಳಿಸುವಂತೆ ಕನ್ನಡ ವಿಶ್ವವಿದ್ಯಾಲಯ ಸಂರಕ್ಷಣಾ ಹೋರಾಟ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಸಮಿತಿಯ ಮುಖಂಡರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ.ರಮೇಶ್, ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಮತ್ತು ಮಹಿಳಾ ಅಧ್ಯಯನ ವಿಭಾಗದಲ್ಲಿ ಖಾಲಿ ಇರುವ 1 ಪ್ರಾಧ್ಯಾಪಕ, 7 ಸಹ ಪ್ರಾಧ್ಯಾಪಕ ಹಾಗೂ 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಭರ್ತಿಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಹುದ್ದೆ, ವಿಭಾಗ, ಆದ್ಯತೆ ಮೀಸಲಾತಿಯ ಅಭ್ಯರ್ಥಿಯು ಲಭ್ಯವಾಗದಿದ್ದಲ್ಲಿ ಬದಲಿ ಮೀಸಲಾತಿ ಎಂದು ತೋರಿಸಲಾಗಿದೆ. ಆದರೆ, ನೇಮಕಾತಿ ಅಧಿಸೂಚನೆಯಲ್ಲಿ ವಿಭಾಗ, ಹುದ್ದೆ, ಸಂಖ್ಯೆ, ಮೀಸಲಾತಿ ಜೊತೆಗೆ ರೋಸ್ಟರ್ ಬಿಂದುವನ್ನು ನಮೂದಿಸಿಲ್ಲ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಸರ್ಕಾರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಮೀಸಲಾತಿ ಶೇ. 50 ಮತ್ತು ಶೇ.33 ಮಹಿಳಾ ಮೀಸಲಾತಿ ನಿಯಮವನ್ನು ಗಾಳಿಗೆ ತೂರಲಾಗಿದೆ. ತನ್ನ ಹಿಂದಿನ ನೇಮಕಾತಿಯಲ್ಲಿ ಇದ್ದ ರೋಸ್ಟರ್ ಬಿಂದುವಿನ ಮುಂದಿನ ಸಂಖ್ಯೆಯನ್ನು ನೂತನ ನೇಮಕಾತಿಯಲ್ಲಿ ನಮೂದಿಸಬೇಕು. ಮಹಿಳಾ ಮೀಸಲಾತಿಯನ್ನು ನಮೂದಿಸಬೇಕು. ಆದರೆ, ಅದನ್ನು ಮಾಡಿಲ್ಲ ಎಂದು ದೂರಿದರು.

ಯುಜಿಸಿ ನಿಯಮದ ಪ್ರಕಾರ ಶೈಕ್ಷಣಿಕ ಅರ್ಹತೆಗೆ ಮೌಲ್ಯಾಂಕನ ನೀಡಿ ಸಂದರ್ಶನ ನಡೆಸುವ ಬದಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿರುವುದು ಪ್ರತಿಭಾವಂತರನ್ನು ಹೊರತಳ್ಳುವ ಹುನ್ನಾರವಾಗಿದೆ. ತಮಗೆ ಬೇಕಾದವರಿಗೆ ಸ್ಥಾನ ನಿಗದಿಗೊಳಿಸಿ ಗುಪ್ತ ಅಜೆಂಡಾವನ್ನು ಜಾರಿಗೊಳಿಸುತ್ತಿರುವ ಕುಲಪತಿಗಳು ಅಧಿಸೂಚನೆಯನ್ನು ತಿದ್ದುಪಡಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಮರಡಿ ಜಂಬಯ್ಯ ನಾಯಕ, ಸುರೇಶ್, ಎಂ.ಮುನಿರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.