ಸಂಡೂರು: ತಾಲ್ಲೂಕಿನ ಧರ್ಮಾಪುರ ಗ್ರಾಮದ ರೈತರ ಜಮೀನುಗಳಲ್ಲಿ ಸರ್ಕಾರವು ರೈಲ್ವೆ ಲೈನ್, ಸ್ಲೈಡಿಂಗ್ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯ ಆದೇಶ ಮಾಡಿರುವುದು ಸರಿಯಲ್ಲ. ಬಡ ರೈತರ ಕೃಷಿ ಚಟುವಟಿಕೆಗಳ ಅಭಿವೃದ್ಧಿಯ ಅನುಕೂಲಕ್ಕಾಗಿ ಶೀಘ್ರವಾಗಿ ಭೂ ಸ್ವಾಧೀನ ಪ್ರಕ್ರಿಯೆಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಗ್ರಾಮದ ರೈತರು ತಾಲ್ಲೂಕಿನ ತಹಶೀಲ್ದಾರ್ ಜಿ.ಅನಿಲ್‍ಕುಮಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬಳಿಕ ಗ್ರಾಮದ ರೈತ ಮುಖಂಡ ಸೋಮಪ್ಪ ಮಾತನಾಡಿ, ‘ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸಣ್ಣ, ಅತಿ ಸಣ್ಣ ರೈತರು ಕೃಷಿ ಭೂಮಿಯಲ್ಲಿ ಬೇಸಾಯ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಭೂಮಿಯು ಹೆಚ್ಚಿನ ಫಲವತ್ತತೆಯಿಂದ ಕೂಡಿದ್ದು, ಅಧಿಕ ಇಳುವರಿಯಿಂದ ರೈತರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಸರ್ಕಾರವು ಏಕಾಏಕಿ ರೈತರ ಜಮೀನುಗಳಲ್ಲಿ ರೈಲ್ವೆ ಲೈನ್, ಸ್ಲೈಡಿಂಗ್ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಆದೇಶ ಹೊರಡಿಸಿರುವುದು ಖಂಡನೀಯ. ಬಡ ರೈತರ ಕೃಷಿ ಚಟುವಟಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಈ ಯೋಜನೆಯನ್ನು ತ್ವರಿತವಾಗಿ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ನಿಂಗಪ್ಪ, ವಿನಯ್, ಶಿವಣ್ಣ, ಹನುಮಂತಪ್ಪ, ಮಂಜುನಾಥ, ನರಸಿಂಹ, ಶ್ರೀಪಾದಸ್ವಾಮಿ, ಎಂ.ಎಲ್.ಕೆ.ನಾಯ್ಡು, ಕುಮಾರಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.