ADVERTISEMENT

ಖಾಸಗಿ, ಅನುದಾನಿತ ಶಾಲಾ–ಕಾಲೇಜುಗಳಲ್ಲಿ ಡೊನೇಷನ್‌ ಹಾವಳಿ ತಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಮೇ 2019, 9:01 IST
Last Updated 21 ಮೇ 2019, 9:01 IST
ಡಿ.ವೈ.ಎಫ್‌.ಐ. ಕಾರ್ಯಕರ್ತರು ವಿಜಯನಗರ ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಡಿ.ವೈ.ಎಫ್‌.ಐ. ಕಾರ್ಯಕರ್ತರು ವಿಜಯನಗರ ಕಾಲೇಜಿನ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ‘ಖಾಸಗಿ ಹಾಗೂ ಅನುದಾನಿತ ಶಾಲಾ–ಕಾಲೇಜುಗಳಲ್ಲಿ ಡೊನೇಷನ್‌ ಹಾವಳಿ ಮಿತಿ ಮೀರಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿ.ವೈ.ಎಫ್‌.ಐ.) ಆಗ್ರಹಿಸಿದೆ.

ಮಂಗಳವಾರ ಡಿ.ವೈ.ಎಫ್‌.ಐ. ಕಾರ್ಯಕರ್ತರು ನಗರದ ವಿಜಯನಗರ ಕಾಲೇಜಿನ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ನಂತರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಶಾಲಾ–ಕಾಲೇಜುಗಳು ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆದುಕೊಳ್ಳುತ್ತಿವೆ. ಯಾವ ಶಿಕ್ಷಣ ಸಂಸ್ಥೆಗಳು ನಿಯಮ ಪಾಲಿಸುತ್ತಿಲ್ಲ. ಇದರಿಂದ ಬಡ ಪೋಷಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ’ ಎಂದು ಡಿ.ವೈ.ಎಫ್‌.ಐ. ರಾಜ್ಯ ಉಪಾಧ್ಯಕ್ಷ ಬಿಸಾಟಿ ಮಹೇಶ್‌ ಆರೋಪಿಸಿದರು.

ADVERTISEMENT

‘ಶೀಘ್ರವೇ ಡೊನೇಷನ್‌ ವಿರೋಧಿ ಸಮಿತಿ ರಚಿಸಬೇಕು. ಏಕರೂಪದ ಶುಲ್ಕಕ್ಕೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬೇಕು. ಡೊನೇಷನ್‌ ಹೆಸರಿನಲ್ಲಿ ಅಧಿಕ ಶುಲ್ಕ ಪಡೆಯುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಲ್ಲೂಕು ಅಧ್ಯಕ್ಷ ಕಿನ್ನಾಳ್‌ ಹನುಮಂತ, ಕಾರ್ಯದರ್ಶಿ ಕಲ್ಯಾಣಯ್ಯ,ಇ.ಮಂಜುನಾಥ,ಬಂಡೆ ತಿರುಕಪ್ಪ,ಕೆ.ಎಂ.ಸಂತೋಷ,ವಿಜಯಕುಮಾರ್,ರಾಜಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.