
ಬಳ್ಳಾರಿ: 1982ರ ಪೂರ್ವದಲ್ಲಿ ಹುಟ್ಟಿದ ದೇವದಾಸಿ ಮಹಿಳೆಯರನ್ನು ಮಾತ್ರವೇ ಹೊಸ ಗಣತಿಯಲ್ಲಿ ಪರಿಗಣಿಸುತ್ತಿರುವುದು, ಆ ಬಳಿಕ ಹುಟ್ಟಿದವರನ್ನು ಮತ್ತು ಕೆಲ ದಾಖಲಾತಿ ಇಲ್ಲದವರನ್ನು ಗಣತಿಗೆ ಪರಿಗಣಸದೇ ಇರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ‘ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ’ದಿಂದ ನಗರದಲ್ಲಿ ಧರಣಿ ಆರಂಭಿಸಲಾಗಿದೆ.
ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಬೆಳಗ್ಗೆಯಿಂದ ಪ್ರತಿಭಟನೆ ಆರಂಭಿಸಲಾಯಿತು.
‘ಸರ್ಕಾರದ ನಿರ್ಧಾರಗಳಿಂದಾಗಿ ಸಾವಿರಾರು ಕುಟುಂಬಗಳು ಗಣತಿಯಿಂದ ಹೊರಗೆ ಉಳಿಯುವಂತಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಮಧ್ಯ ಪ್ರವೇಶ ಮಾಡಿ ಲೋಪ ಸರಿಪಡಿಸಬೇಕು. ಎಲ್ಲ ದೇವದಾಸಿ ಮಹಿಳೆಯರ ಕುಟುಂಬದ ಮೂರು ತಲೆ ಮಾರಿನ ಸದಸ್ಯರಲ್ಲಿ ಯಾರೊಬ್ಬರೂ ಗಣತಿಯಾಚೆ ಉಳಿಯದಂತೆ ಕ್ರಮ ಕೈಗೊಳ್ಳಬೇಕು’ ಎಂದು ವಿಮೋಚನಾ ಸಂಘ ಆಗ್ರಹಿಸಿದೆ.
‘2007ರಲ್ಲಿ ಸರ್ಕಾರವೇ ನಡೆಸಿದ ಸರ್ವೇಯಿಂದ ವಯೋಮಿತಿ ಆಧಾರದಲ್ಲಿ ಹಲವು ದೇವದಾಸಿಯರನ್ನು ಹೊರಗಿಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸರ್ವೆಪಟ್ಟಿಯಿಂದ ಬಿಟ್ಟು ಹೋದ ದೇವದಾಸಿ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ತಾಯಿಯ ದೇವದಾಸಿ ದೃಢೀಕರಣ ಪತ್ರ ನೀಡಬೇಕು. ₹2 ಲಕ್ಷಗಳ ಸಾಲಸೌಲಭ್ಯ ಒದಗಿಸಬೇಕು. ಸಹಾಯ ಧನ ಅಥವಾ ಪಿಂಚಣಿಯನ್ನು ₹10,000ಕ್ಕೆ ಏರಿಸಬೇಕು. ದೇವದಾಸಿ ಮಕ್ಕಳಿಗೆ ಉದ್ಯೋಗ ನೀಡಬೇಕುಠ ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ವಿಮೋಚನ ಸಂಘ ಮಂಡಿಸಿದೆ.
ಹೋರಾಟದಲ್ಲಿ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಈರಮ್ಮ, ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ, ಸಂಡೂರು ತಾಲೂಕು ಅಧ್ಯಕ್ಷೆ ಮಾರಮ್ಮ, ಕಾರ್ಯದರ್ಶಿ ದುರುಗಮ್ಮ, ಸಿ. ವೀರೇಶ, ಹುಲಿಗೆಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.