ADVERTISEMENT

ಬಳ್ಳಾರಿಯಲ್ಲಿ ಡಿಜಿಟಲ್‌ ಅರೆಸ್ಟ್‌: 27 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 5:30 IST
Last Updated 7 ನವೆಂಬರ್ 2025, 5:30 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ಬಳ್ಳಾರಿ: ಜಿಲ್ಲೆಯಲ್ಲಿ ಮತ್ತೆ ‘ಡಿಜಿಟಲ್‌ ಅರೆಸ್ಟ್‌’ ಸದ್ದು ಮಾಡಿದ್ದು, ವೃದ್ಧರೊಬ್ಬರಿಂದ ₹27 ಲಕ್ಷ ಕಸಿದು ಮೋಸ ಮಾಡಲಾಗಿದೆ. 

ಈ ಸಂಬಂಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ(ಸಿಇಎನ್) ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. 

ಅ.31ರಂದು ಬೆಳಿಗ್ಗೆ ದೂರುದಾರ ವ್ಯಕ್ತಿಗೆ ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿದ್ದ ಅಪರಿಚಿತರು ತಾವು ಟೆಲಿಕಾಂ, ಪೊಲೀಸರು, ಸಿಬಿಐ ಅಧಿಕಾರಿಗಳು ಎಂದು ಹೇಳಿದ್ದರು.

ADVERTISEMENT

‘ನಿಮ್ಮ ಆಧಾರ್‌ ಕಾರ್ಡ್ ಮತ್ತು ಹೆಸರಿನಲ್ಲಿ ಅಕೌಂಟ್ ತೆಗೆದು ಅದರಿಂದ ₹2 ಸಾವಿರ ಕೋಟಿ ವರೆಗೆ ವಂಚನೆ ಮಾಡಲಾಗಿದೆ. ಮಹಿಳೆಯರಿಗೆ ಆಶ್ಲೀಲ ಸಂದೇಶಗಳನ್ನು ರವಾನಿಸಲಾಗಿದೆ. ಈ ಬಗ್ಗೆ ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣೆ ನಡೆಯುವ ವರೆಗೆ ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣದಲ್ಲಿ ಶೇ 90ರಷ್ಟು  ಹಣವನ್ನು ನಮಗೆ ವರ್ಗಾಯಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಬಂಧಿಸುತ್ತೇವೆ’ ಎಂದು ವ್ಯಕ್ತಿಯನ್ನು ಭಯ ಪಡಿಸಲಾಗಿದೆ.

ಇದಕ್ಕೆ ಹೆದರಿದ ವ್ಯಕ್ತಿ ಹಂತ ಹಂತವಾಗಿ ₹27,00,000 ಹಣವನ್ನು ವಂಚಕರು ಹೇಳಿದ ಖಾತೆಗೆ ಹಾಕಿದ್ದಾರೆ. ದೂರುದಾರ ವ್ಯಕ್ತಿ ಭಯಪಡುತ್ತಿದ್ದುದ್ದನ್ನು ಗಮನಿಸಿದ ಅವರ ಮಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ. 

ಜುಲೈ 18ರಂದು ನಗರದ ನಿವೃತ್ತ ಐಟಿ ಉದ್ಯೋಗಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ಜಾಲಕ್ಕೆ ಸಿಲುಕಿ  ₹1.37 ಕೋಟಿ ಕಳೆದುಕೊಂಡಿದ್ದರು. ಜುಲೈ 5ರಂದು ನಡೆದಿದ್ದ ಇನ್ನೊಂದು ಡಿಜಿಟಲ್‌ ಅರೆಸ್ಟ್‌ ಪ್ರಕರಣದಲ್ಲಿ ₹88 ಲಕ್ಷ ವಂಚನೆ ಮಾಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.