ತೆಕ್ಕಲಕೋಟೆ: ಸಮೀಪದ ಉಪ್ಪಾರ ಹೊಸಳ್ಳಿ ಗ್ರಾಮ ಬಳಿಯ ಬ್ರೈಟರ್ ಗ್ರೀನ್ ಯೂನಿವರ್ಸಲ್ ಸೌರ ವಿದ್ಯುತ್ ಘಟಕದ ಸೌಕರರ ವಜಾ ಖಂಡಿಸಿ ಗ್ರಾಮಸ್ಥರು ಹಾಗೂ ರೈತರು ಧರಣಿ ಕುಳಿತಿರುವ ಘಟನೆ ನಡೆದಿದೆ.
ಶಾಹಿ ಎಕ್ಸ್ ಪೋರ್ಟ್ ಅಡಿಯಲ್ಲಿನ ಬಿಜಿಯುಇ ಸೌರ ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಟು ಜನ ನೌಕರರಲ್ಲಿ ಮೂವರನ್ನು ಶನಿವಾರ ವಜಾ ಗೊಳಿಸಲಾಗಿತ್ತು. ಸೋಮವಾರ ಮತ್ತೆ ಮೂವರಿಗೆ ನೋಟಿಸ್ ಜಾರಿ ಮಾಡಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿತ್ತು. ಇದನ್ನು ಖಂಡಿಸಿ ಉಳಿದ ಸೌಕರರು ಹಾಗೂ ಗ್ರಾಮಸ್ಥರು ಸೇರಿ ಕಂಪನಿ ವಿರುದ್ಧ 5 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ.
ಬಳ್ಳಾರಿ ಜಿಲ್ಲಾ ರೈತ ಮೋರ್ಚ್ ಪ್ರಧಾನ ಕಾರ್ಯದರ್ಶಿ ಶರಣಬಸವನಗೌಡ ಮಾತನಾಡಿ, 'ನೌಕರರು ಕ್ಲೈಂಟ್ (ಮಾಲೀಕರ ಪ್ರತಿನಿಧಿ) ಯೊಂದಿಗೆ ಮಾತನಾಡಿದ್ದಾರೆ ಎಂದು ಸುಖಾ ಸುಮ್ಮನೆ ಆರೋಪಿಸಿ ಮೂವರನ್ನು ಅಮಾನತು ಮಾಡಿರುತ್ತಾರೆ. ಯಾವುದೇ ತಪ್ಪು ಮಾಡಿರದ ಸೌಕರರನ್ನು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ನಮ್ಮದೇ ಭೂಮಿಯನ್ನು ಪಡೆದು ನಮ್ಮ ಮಕ್ಕಳಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
'ವಜಾಗೊಂಡಿರುವ ಸೌಕರರು ಕಂಪನಿಯ ಷರತ್ತುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಮುಚ್ಚಳಿಕೆ ಹಾಗೂ ಕ್ಷಮಾಪಣಾ ಪತ್ರ ಬರೆದು ಕೊಟ್ಟಲ್ಲಿ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆಯನ್ನು ಕಂಪೆನಿ ನೀಡಿದೆ' ಎಂದು ಬಿಜಿಯುಇ ಪ್ರತಿನಿಧಿ ಹಾಗೂ ಕ್ಷೇತ್ರ ಮೇಲ್ವಿಚಾರಕ ಬಸವರಾಜ ತಿಳಿಸಿದರು.
'ಮಾಡಿರದ ತಪ್ಪನ್ನು ಮಾಡಿದ್ದೇವೆ ಎಂದು ಒಪ್ಪಿಕೊಂಡು ಕ್ಷಮಾಪಣಾ ಪತ್ರ ಬರೆಯುವಂತೆ ಕಂಪೆನಿಯು ಕೇಳುತ್ತಿದ್ದು, ಇದು ಯಾವ ನ್ಯಾಯ?. ಯಾವುದೇ ಷರತ್ತು ಇಲ್ಲದೆ ಸೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವವರೆಗೆ ಹೋರಾಟ ಮುಂದುವರೆಸುತ್ತೇವೆ' ಎಂದು ಗ್ರಾಮಸ್ಥ ರುದ್ರಗೌಡ ತಿಳಿಸಿದರು.
ರೈತ ಮುಖಂಡರಾದ ವೆಂಕಟೇಶ ಗೌಡ, ವೀರನಗೌಡ, ಶರಭನಗೌಡ, ವಿರುಪನಗೌಡ, ಮಲ್ಲಿಕಾರ್ಜುನ ಗೌಡ, ಗುರು ಬಸವನಗೌಡ, ರುದ್ರಗೌಡ, ಚೆನ್ನಪ್ಪ ಗೌಡ, ವೀರೇಶ ಗೌಡ, ಸೋಮನಗೌಡ, ಬಸವನಗೌಡ ಹಾಗೂ ತಿಮ್ಮನಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.