ADVERTISEMENT

ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದು: ಎಡಪಕ್ಷಗಳ ಒಕ್ಕೂಟ ಪ್ರತಿಭಟನೆ

'ಪ್ರಜಾಪ್ರಭುತ್ವದ ಕಗ್ಗೊಲೆ'

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 11:05 IST
Last Updated 7 ಆಗಸ್ಟ್ 2019, 11:05 IST
ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿನಾಶವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ಒಕ್ಕೂಟ, ಸಿಪಿಐ, ಸಿಪಿಐಎಂ ಮುಖಂಡರು ಬಳ್ಳಾರಿಯಲ್ಲಿ ಬುಧವಾರ ಧರಣಿ ನಡೆಸಿದರು.
ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿನಾಶವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ಒಕ್ಕೂಟ, ಸಿಪಿಐ, ಸಿಪಿಐಎಂ ಮುಖಂಡರು ಬಳ್ಳಾರಿಯಲ್ಲಿ ಬುಧವಾರ ಧರಣಿ ನಡೆಸಿದರು.   

ಬಳ್ಳಾರಿ: ‘ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ’ ಎಂದು ಆರೋಪಿಸಿ ಎಡಪಕ್ಷಗಳ ಒಕ್ಕೂಟ, ಸಿಪಿಐ, ಸಿಪಿಐಎಂ ಮುಖಂಡರು ನಗರದಲ್ಲಿ ಬುಧವಾರ ಧರಣಿ ನಡೆಸಿದರು.

‘ಪಾಕಿಸ್ತಾನದ ಆಕ್ರಮಣಕಾರರಿಂದ ರಕ್ಷಣೆ ಪಡೆಯಲು ಕಾಶ್ಮೀಕರದ ಜನ ಭಾರತಕ್ಕೆ ತಮ್ಮನ್ನು ಒಪ್ಪಿಸಿಕೊಂಡಿದ್ದರು. 370ನೇ ವಿಧಿಯ ಮೂಲಕ ವಿಶೇಷ ಸ್ಥಾನಮಾನ ಮತ್ತು ಸ್ವಾಯತ್ತತೆಯನ್ನು ಒದಗಿಸಲು ಭಾರತ ಬದ್ಧತೆ ತೋರಿತ್ತು. ಈಗ ಅದನ್ನು ರದ್ದುಪಡಿಸುವ ಮೂಲಕ, ಮೋದಿ ನೇತೃತ್ವದ ಸರ್ಕಾರ ಅಲ್ಲಿನ ಜನರಿಗೆ ದ್ರೋಹ ಬಗೆದಿದೆ’ ಎಂದು ಮುಖಂಡರಾದ ಟಿ.ಜಿ.ವಿಠಲ್‌, ವಿ.ಎಸ್‌.ಶಿವಶಂಕರ್‌, ಜೆ.ಸತ್ಯಬಾಬು ಮತ್ತು ಜೆ.ಚಂದ್ರಕುಮಾರಿ ದೂರಿದರು.

‘ಭಾರತದ ಏಕತೆ ಅದರ ವೈವಿಧ್ಯತೆಯಲ್ಲಿದೆ ಎಂಬುದು ಸಾರ್ವತ್ರಿಕ ಸತ್ಯ. ಆದರೆ ಅದನ್ನು ಬಿಜೆಪಿ ಆಡಳಿತಗಾರರು ಒಪ್ಪುವುದಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ಅವರು ಆಕ್ರಮಿತ ಪ್ರದೇಶ ಎಂದೇ ಪರಿಗಣಿಸಿದ್ದಾರೆ. ಸಂವಿಧಾನವನ್ನು ಮೆಟ್ಟಿ ಅವರು ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಅನ್ನು ಕೇಂದ್ರೀಯ ಆಡಳಿತ ಪ್ರದೇಶಗಳಾಗಿ ಪರಿವರ್ತಿಸುತ್ತಿದ್ದಾರೆ. ಇದು ರಾಷ್ಟ್ರೀಯ ಏಕತೆ ಮತ್ತು ಭಾರತ ಒಕ್ಕೂಟ ಪರಿಕಲ್ಪನೆ ಮೇಲಿನ ದೊಡ್ಡ ದಾಳಿ’ ಎಂದು ಪ್ರತಿಪಾದಿಸಿದರು.

ADVERTISEMENT

ಮುಖಂಡರಾದ ಕೆ.ನಾಗಭೂಷಣರಾವ್‌, ಶೇಖರ್‌ಬಾಬು, ಕಟ್ಟೆ ಬಸಪ್ಪ, ಪಾಂಡು, ವಿಜಯಕುಮಾರ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.