ADVERTISEMENT

ಪಕ್ಷಕ್ಕೆ ದ್ರೋಹ ಮಾಡಿದರೆ ತಾಯಿಗೆ ದ್ರೋಹ ಬಗೆದಂತೆ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 8:34 IST
Last Updated 16 ಜೂನ್ 2019, 8:34 IST
ಹೊಸಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಮಲಾಪುರ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹಾಗೂ ಪಕ್ಷದ ಮುಖಂಡರು ಸನ್ಮಾನಿಸಿದರು
ಹೊಸಪೇಟೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಕಮಲಾಪುರ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹಾಗೂ ಪಕ್ಷದ ಮುಖಂಡರು ಸನ್ಮಾನಿಸಿದರು   

ಹೊಸಪೇಟೆ: ‘ಯಾರು ಪಕ್ಷ ನಿಷ್ಠೆ ಮರೆತು, ಸ್ವಹಿತಾಸಕ್ತಿಗಾಗಿ ಕೆಲಸ ಮಾಡುತ್ತಾರೋ ಅಂತಹವರು ತಾಯಿಗೆ ದ್ರೋಹ ಬಗೆದಂತೆ’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಹೇಳಿದರು.

ಭಾನುವಾರ ನಗರದಲ್ಲಿಕಮಲಾಪುರ ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರ ಅಭಿನಂದನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಎಲ್ಲೆಲ್ಲೂ ಅಸ್ಥಿರತೆ ಕಾಡುತ್ತಿದೆ. ಅದಕ್ಕೆ ಮುಖ್ಯ ಕಾರಣ ಪಕ್ಷ ನಿಷ್ಠೆ ಮರೆತಿರುವುದು. ಗ್ರಾಮ ಪಂಚಾಯಿತಿಯಿಂದ ಲೋಕಸಭೆ ಸದಸ್ಯರ ವರೆಗೆ ಪಕ್ಷದ ಚಿಹ್ನೆಯಡಿ ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಂತರಅದನ್ನು ಮರೆತು ಪಕ್ಷಾಂತರ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಪಕ್ಷಕ್ಕೆ ದ್ರೋಹ ಬಗೆಯದಂತಹ ಗುಣ ಆ ವಿರೂಪಾಕ್ಷೇಶ್ವರ ಎಲ್ಲರಿಗೂ ಕೊಡಲಿ ಎಂದು ಬೇಡಿಕೊಳ್ಳುವೆ‘ ಎಂದರು.

ADVERTISEMENT

‍‘ಕಮಲಾಪುರ ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳವಾಗಿದೆ. ಹಂಪಿಗೆ ಬರುವ ಪ್ರವಾಸಿಗರಿಗೆ ಕುಡಿಯುವ ನೀರು, ವಸತಿ, ಸ್ನಾನಗೃಹ, ಶೌಚಾಲಯ ಸೇರಿದಂತೆ ಯಾವುದೇ ವ್ಯವಸ್ಥೆಯಿಲ್ಲ. ಅದಕ್ಕಾಗಿ ಗೆದ್ದ 17 ಜನ ಸದಸ್ಯರು ಶ್ರಮಿಸಬೇಕು.ಅಧಿಕಾರ ಬರುತ್ತೆ ಹೋಗುತ್ತೆ. ಏನು ಕೆಲಸ ಮಾಡಿದ್ದೇವೆ ಎನ್ನುವುದು ಕೊನೆಯಲ್ಲಿ ಉಳಿಯುತ್ತದೆ’ಎಂದು ಕಿವಿಮಾತು ಹೇಳಿದರು.

‘ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ತೋರುವ ಪರಾಕ್ರಮ ನಂತರ ತೋರುವುದಿಲ್ಲ. ಬಳಿಕ ಸನ್ಮಾನ, ತುಲಾಭಾರ, ದೇವಸ್ಥಾನ ಭೇಟಿಗೆ ಸೀಮಿತರಾಗಿದ್ದಾರೆ. ಇದನ್ನೆಲ್ಲ ಬದಿಗೊತ್ತಿ ಜನರಿಗಾಗಿ ಮೋದಿ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ಮಾತನಾಡಿ, ’ಇಡೀ ದೇಶದಾದ್ಯಂತ ಮೋದಿ ಅಲೆಯಲ್ಲಿ ಬಿಜೆಪಿ ಗೆದ್ದಿದೆ. ಆದರೆ, ಕಮಲಾಪುರದ ಜನತೆ ನಮ್ಮ ಕೈಹಿಡಿದಿದ್ದಾರೆ. ಮತ್ತೊಮ್ಮೆ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಕಾಂಗ್ರೆಸ್‌ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದರೂ ಲೋಕಸಭೆ ಚುನಾವಣೆಯಲ್ಲಿ ಸೋಲಾಗಿದೆ. ಇದೇಕೇ ಎಂಬುದು ನಮಗೆ ಅರ್ಥವಾಗುತ್ತಿಲ್ಲ‘ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಟಿಂಕರ್‌ ರಫೀಕ್‌, ಅಮಾಜಿ ಹೇಮಣ್ಣ, ಮುಖಂಡರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ಸಿದ್ದನಗೌಡ, ಅಯ್ಯಾಳಿ ತಿಮ್ಮಪ್ಪ, ಗುಜ್ಜಲ ರಘು, ಗುಜ್ಜಲ ನಾಗರಾಜ, ಫಹೀಮ್‌ ಬಾಷಾ, ಡಿ. ವೆಂಕಟರಮಣ, ಕೆ. ಉದ್ದಾನಪ್ಪ, ವೀರಸ್ವಾಮಿ, ವಿ. ಸೋಮಪ್ಪ, ನಿಂಬಗಲ್‌ ರಾಮಕೃಷ್ಣ ಇದ್ದರು.

ಪಕ್ಷೇತರ ಸದಸ್ಯರಾದ ಸ್ಟೈಲ್‌ ರಾಜ, ಮಮತಾ ಮಂಜುನಾಥ, ಗಂಗಮ್ಮನವರು ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.