ADVERTISEMENT

‘ಹಿಂದುಳಿದ ಸಮುದಾಯಗಳ ಕಡೆಗಣನೆ ಸಲ್ಲ'

​ಪ್ರಜಾವಾಣಿ ವಾರ್ತೆ
Published 9 ಮೇ 2019, 14:01 IST
Last Updated 9 ಮೇ 2019, 14:01 IST
9ಎಚ್‌ಡಿಎಲ್2 ಹೂವಿನಹಡಗಲಿ ತಾಲ್ಲೂಕು ಮೈಲಾರದ ಕಾಗಿನೆಲೆ ಶಾಖಾಮಠದಲ್ಲಿ ಆಯೋಜಿಸಿದ್ದ ಸ್ಥಿರಬಿಂಬ ಸ್ಪಟಿಕ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
9ಎಚ್‌ಡಿಎಲ್2 ಹೂವಿನಹಡಗಲಿ ತಾಲ್ಲೂಕು ಮೈಲಾರದ ಕಾಗಿನೆಲೆ ಶಾಖಾಮಠದಲ್ಲಿ ಆಯೋಜಿಸಿದ್ದ ಸ್ಥಿರಬಿಂಬ ಸ್ಪಟಿಕ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.   

ಹೂವಿನಹಡಗಲಿ: ‘ತಳ ಸಮುದಾಯಗಳ ಶೋಷಣೆ, ಹಿಂದುಳಿದ ಜನಾಂಗಗಳ ಕಡೆಗಣನೆ ಸರಿಯಲ್ಲ. ಶರೀರ ಸುಸ್ಥಿರವಾಗಿರಬೇಕಾದರೆ ತಲೆಯಷ್ಟೇ ಕಾಲು ಕೂಡ ಮುಖ್ಯ. ಹೀಗಾಗಿ ಯಾರನ್ನೂ ತುಚ್ಛವಾಗಿ ಕಾಣಬಾರದು’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮೈಲಾರದ ಕಾಗಿನೆಲೆ ಶಾಖಾ ಮಠದಲ್ಲಿ ಗುರುವಾರ ಆಯೋಜಿಸಿದ್ದ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ವೇದ ಉಪನಿಷತ್ತು ಕಾಲದಲ್ಲಿನ ಚತುರ್ವರ್ಣಗಳು ಜಾತಿ ಸೂಚಕ ಆಗಿರಲಿಲ್ಲ. ಬ್ರಾಹ್ಮಣರನ್ನು ತಲೆಗೆ, ಶೂದ್ರರನ್ನು ಪಾದಕ್ಕೆ ಹೋಲಿಕೆ ಮಾಡಿರುವುದು ಅರ್ಥಹೀನ. ಕಾಲಿಗೆ ಊನವಾದರೆ ಎಷ್ಟೇ ಬುದ್ದಿವಂತನಾಗಿದ್ದರೂ ಹೆಳವನಾಗಬೇಕಾಗುತ್ತದೆ. ಹಾಗೆಯೇ ಜಾತಿ ವ್ಯವಸ್ಥೆಯಲ್ಲಿ ಕೆಳ ಸಮುದಾಯಗಳನ್ನು ನಿಕೃಷ್ಟವಾಗಿ ಕಾಣುವವರನ್ನು ಬೌದ್ದಿಕ ಹೆಳವರು ಎಂದು ಕರೆಯಬೇಕಾಗುತ್ತದೆ’ ಎಂದರು.

ADVERTISEMENT

‘ಹಿಂದುಳಿದ ಕುರುಬ ಸಮುದಾಯಕ್ಕೆ ರಾಜಕೀಯ, ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಯಶಸ್ವಿಯಾಗಿದ್ದಾರೆ. ಇನ್ನೂ ಹೆಚ್ಚು ರಚನಾತ್ಮಕ ಕಾರ್ಯಗಳನ್ನು ಮಾಡಲು ಸಮಾಜದವರು ಅವರಿಗೆ ನೈತಿಕ ಬಲ ನೀಡಬೇಕು’ ಎಂದು ಹೇಳಿದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಹಿಂದುಳಿದ ಕುರುಬ ಸಮಾಜದಲ್ಲಿ ಕಾಗಿನೆಲೆ ಶ್ರೀಗಳು ಧಾರ್ಮಿಕ, ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದ್ದಾರೆ. ನಾವು ಹಾಲುಮತದವರು ಎಂದು ಹೇಳಿಕೊಳ್ಳಲು ಯಾರೂ ಹಿಂಜರಿಯಬಾರದು. ಸಮಾಜದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಮುಖಂಡರಾದ ಬಿ.ಹನುಮಂತಪ್ಪ, ಎಂ.ಪರಮೇಶ್ವರಪ್ಪ, ಗಾಜಿಗೌಡ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.