ಹರಪನಹಳ್ಳಿ: ಇಲ್ಲಿನ ಅಯ್ಯನಕೆರೆ ಪುನರುಜ್ಜೀವನ ಕಾಮಗಾರಿ ಕೈಗೊಳ್ಳಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಪುರಸಭೆ ಸಭಾಂಗಣದಲ್ಲಿ ಗುರುವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಪುರಸಭೆ ಅಧ್ಯಕ್ಷೆ ಫಾತೀಮಾಬಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಲಂಡನ್ ಹಳ್ಳದ ಮೂಲಕ ಅಯ್ಯನಕೆರೆಗೆ ಸೇರುವ ತ್ಯಾಜ್ಯ ತಡೆಯಲು, 7 ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ, ಬಸ್ ನಿಲ್ದಾಣ ಪಕ್ಕದಲ್ಲಿ ವಾಣಿಜ್ಯ ಮಳಿಗೆಗಳ ಡಿಪಿಆರ್ ತಯಾರಿಸುವ ಟೆಂಡರ್‌ಗಳಿಗೆ ಸುದೀರ್ಘ ಚರ್ಚೆ ಬಳಿಕ ಸಭೆ ಅನುಮೋದಿಸಿತು.
ಸದಸ್ಯ ಎಂ.ವಿ.ಅಂಜಿನಪ್ಪ, ‘ನಗರಸಭೆ ಆಗಿರುವ ಕಾರಣ ಕೊಟ್ಟೂರು ರಸ್ತೆ ನೂತನ ಬಡಾವಣೆಯಲ್ಲಿ ಇರುವ ಸಿ.ಎ ನಿವೇಶನ ಪುರಸಭೆ ಸಿಬ್ಬಂದಿಗೆ ವಸತಿ ಗೃಹ ಕಟ್ಟಲು ಮೀಸಲಿಡಬೇಕು’ ಎಂದು ತಿಳಿಸಿದಾಗ, ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿದ ಸದಸ್ಯ ಜಾಕೀರ ಹುಸೇನ್, ‘ನಗರದಲ್ಲಿ ಬೀದಿನಾಯಿಗಳ, ಹಂದಿ, ಕೋರಿ ಹುಳುಗಳ ತಡೆಗೂ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ಸದಸ್ಯರಾದ ಇಜಂತಕರ್ ಮಂಜುನಾಥ, ರೆಹಮಾನ್, ಲಾಟಿ ದಾದಾಪೀರ ಧ್ವನಿಗೂಡಿಸಿದರು.
ಬಾಣಗೆರೆಯಲ್ಲಿ ಒಳಚರಂಡಿ ಚೇಂಬರ್ ಅಳವಡಿಸಲು ಯೋಜನೆ ಅನುಷ್ಠಾನದ ಕುರಿತು ಎದುರಾದ ಪ್ರಶ್ನೆಗೆ ಎಂಜಿನಿಯರ್ ಅಮರೇಶ್, ‘ಒಳಚರಂಡಿಯಲ್ಲಿ ಬಿಟ್ಟಿರುವ ಎಲ್ಲ ವಾರ್ಡ್‌ಗಳಲ್ಲಿ ಅಳವಡಿಸಲು ₹57 ಕೋಟಿ ಕ್ರಿಯಾಯೋಜನೆ ತಯಾರಿಸಿ, ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.
ಸದಸ್ಯ ಎಂ.ವಿ. ಅಂಜಿನಪ್ಪ ಮಾತನಾಡಿ, ‘ಎರಡು ವೃತ್ತಗಳ ಅಭಿವೃದ್ಧಿಗೆ ಶಾಸಕರು ₹4 ಕೋಟಿ ಅನುದಾನ ನಿಗದಿಪಡಿಸಿದ್ದಾರೆ’ ಎಂದು ತಿಳಿಸಿದರು.
ಸಂಡೂರುಗೇರಿಯ ಎಚ್‍ಎಸ್‍ಡಿ ಶಾಲೆಯಲ್ಲಿ ಶೌಚಾಲಯ ನಿರ್ಮಿಸುವುದು, ಮೈಲಾರ ರಸ್ತೆಯಲ್ಲಿ ಶಿಥಿಲಗೊಂಡ ಸಿಡಿ ದುರಸ್ತಿಗೊಳಿಸುವ ಕುರಿತು ಪ್ರಸ್ತಾಪ ಬಂತು.
ಉಪಾಧ್ಯಕ್ಷ ಎಚ್.ಕೊಟ್ರೇಶ್, ಸದಸ್ಯರಾದ ಹೇಮಣ್ಣ ಮೋರಗೇರಿ, ಜಾವಿದ್, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ನಾಮನಿರ್ದೇಶಿತ ಸದಸ್ಯ ವಸಂತಪ್ಪ, ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಗೊಂಗಡಿ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.