ADVERTISEMENT

ನಾಟಕಕ್ಕೆ ನಿರ್ಬಂಧ: ಅಸಮಾಧಾನ

ನಾಟಕ ಕಂಪನಿಗಳಿಗೆ ಸುಣ್ಣ, ಚಿತ್ರಮಂದಿರಗಳಿಗೆ ಬೆಣ್ಣೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 4:36 IST
Last Updated 13 ಮಾರ್ಚ್ 2021, 4:36 IST

ಕೊಟ್ಟೂರು: ರಾಜ್ಯ ಸರ್ಕಾರವು ಚಿತ್ರ ಮಂದಿರಗಳಿಗೆ ಬೆಣ್ಣೆ, ನಾಟಕ ಕಂಪನಿಗಳಿಗೆ ಸುಣ್ಣ ಹಚ್ಚಿದ ಹಾಗೆ ಚಿತ್ರ ಮಂದಿರಗಳಿಗೆ ಮಾತ್ರ ಅನುಮತಿ ನೀಡಿ, ನಾಟಕ ಕಂಪನಿಗಳಿಗೆ ಕೊರೊನಾ ವೈರಸ್ ನೆಪವೊಡ್ಡಿ ಅನುಮತಿ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ವಕ್ತಾರ ಪತ್ರೇಶ್ ಹಿರೇಮಠ್ ಕಿಡಿಕಾರಿದರು.

ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆಗಳು, ಗಾರ್ಮೆಂಟ್ಸ್, ಸಾರಿಗೆ, ರೈಲು, ಹೋಟೆಲ್‌, ಮಾಲ್‌ಗಳು ಸೇರಿದಂತೆ ಎಲ್ಲವೂ ತೆರೆದಿವೆ. ಕೋವಿಡ್‌–19ನಿಂದಾಗಿ ನಾಟಕ ಕಂಪನಿಗಳ ಮಾಲೀಕರು ಹಾಗೂ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಂಗಭೂಮಿಯನ್ನೇ ನಂಬಿರುವ ಅದೆಷ್ಟೋ ಕುಟುಂಬಗಳು ಇಂದು ಕೆಲಸವಿಲ್ಲದೆ ಬಳಲುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಇವರುಗಳ ನೆರವಿಗೆ ಧಾವಿಸಿ ಷರತ್ತುಬದ್ಧ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ ಮಾತನಾಡಿ, ಕೊರೊನಾ ಎರಡನೇ ಅಲೆ ನಡುವೆಯೂ ರಾಬರ್ಟ್ ಚಿತ್ರ ನೋಡಲು ಜನರು ಚಿತ್ರಮಂದಿರಗಳಿಗೆ ಮುಗಿಬೀಳುತ್ತಿದ್ದಾರ. ಆದರೆ ನಾಟಕ ಕಂಪನಿಯ ಮಾಲೀಕರಿಗೆ ಮಾತ್ರ ನಿರ್ಬಂಧ ಹಾಕಿರುವುದು ಸರ್ಕಾರದ ಮಲತಾಯಿ ಧೋರಣೆಯಾಗಿದೆ. ಅನುಮತಿ ನೀಡುವ ಅಧಿಕಾರಿಗಳು ಇವರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಹೇಳಿದರು.

ADVERTISEMENT

ಈ ಸಂದರ್ಭದಲ್ಲಿ ಕನನಾಯಕನಕಟ್ಟೆ ಪ್ರದೀಪ್ ಗೌಡ, ಕೊಟ್ರೇಶ್ ತಿಮ್ಮಲಾಪುರ, ಜಗದೀಶ್ ಹಿರೇಮಠ್, ಹೇಮಂತ್ ಕುಮಾರ್ ಇದ್ದರು.

ಕಲಬುರ್ಗಿ, ಗದದ, ಬಾದಾಮಿ ಬನಶಂಕರಿ ಇನ್ನೂ ಅನೇಕ ಜಿಲ್ಲೆಗಳಲ್ಲಿ ನಾಟಕ ಕಂಪನಿಗಳಿಗೆ ಅನುಮತಿ ಸಿಕ್ಕಿದೆ. ಆದರೆ ಕೊಟ್ಟೂರು ಜಾತ್ರೆ ಪ್ರಯುಕ್ತ 3 ಲಕ್ಷ ವೆಚ್ಚದಲ್ಲಿ ನಾಟಕ ಕಂಪನಿಯನ್ನು ಹಾಕಲಾಗಿದ್ದು. ಇದೀಗ ನಿರ್ಬಂಧ ಹಾಕಿದ್ದು ಇದ್ದ ಹಣವೆಲ್ಲ ಖರ್ಚಾಗಿ ಹೋಗಿದೆ, ಮುಂದೆ ಇದನ್ನು ಎತ್ತಿಕೊಂಡು ಬೇರೆಡೆಗೆ ಹೋಗಲು ಲಾರಿ ಬಾಡಿಗೆ ಕಟ್ಟಲು ಸಹ ನಮ್ಮಲ್ಲಿ ಹಣವಿಲ್ಲ. ದಯವಿಟ್ಟು ಜಿಲ್ಲಾಧಿಕಾರಿ ಇದಕ್ಕೆ ಅನುಮತಿ ನೀಡಿದರೆ ಕಲಾವಿದರಿಗೆ ಸಿಬ್ಬಂದಿಗಳಿಗೆ ತುತ್ತು ಅನ್ನ ಹಾಕಿದಂತೆ ಆಗುತ್ತದೆ ಎಂದು ರಾಜಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.