ADVERTISEMENT

ಬಳ್ಳಾರಿ: ಕುಡಿಯುವ ನೀರಿನ ಕಾಮಗಾರಿ ಸ್ಥಗಿತ

ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಮಣ್ಣುಪಾಲು

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 6:36 IST
Last Updated 21 ಜೂನ್ 2025, 6:36 IST
ತೆಕ್ಕಲಕೋಟೆ ಪಟ್ಟಣದ ದೇವಿನಗರದ ಕುಡಿಯುವ ನೀರಿನ ಕೆರೆಯ ಬಳಿ ನಿರ್ಮಿಸಲಾದ 24x7 ಅರೆಬರೆ ಕಾಮಗಾರಿಯಿಂದ ನೆಲ ಬಿಟ್ಟು ಮೇಲೇಳದ ನೀರಿನ ಟ್ಯಾಂಕ್ ಮತ್ತು ತೊಟ್ಟಿ
ತೆಕ್ಕಲಕೋಟೆ ಪಟ್ಟಣದ ದೇವಿನಗರದ ಕುಡಿಯುವ ನೀರಿನ ಕೆರೆಯ ಬಳಿ ನಿರ್ಮಿಸಲಾದ 24x7 ಅರೆಬರೆ ಕಾಮಗಾರಿಯಿಂದ ನೆಲ ಬಿಟ್ಟು ಮೇಲೇಳದ ನೀರಿನ ಟ್ಯಾಂಕ್ ಮತ್ತು ತೊಟ್ಟಿ   

ತೆಕ್ಕಲಕೋಟೆ: ಪಟ್ಟಣದ 20 ವಾರ್ಡ್‌ಗಳಿಗೆ 24x7 ಕುಡಿಯುವ ನೀರು ಸರಬರಾಜು ಮಾಡುವ ಮಹತ್ವಾಕಾಂಕ್ಷೆಯ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದ್ದು ಸರ್ಕಾರದ ಕೋಟ್ಯಂತರ ರುಪಾಯಿ ಹಣ ಮಣ್ಣುಪಾಲಾಗಿದೆ.

ಒಟ್ಟು ₹ 21.73 ಕೋಟಿ ವೆಚ್ಚದ 24x7 ಕಾಮಗಾರಿ 2018ರಲ್ಲಿ ಪ್ರಾರಂಭವಾಗಿ ಐದು ವರ್ಷ ಕಳೆದರೂ ಶೇಕಡ 50ರಷ್ಟು ಕಾರ್ಯ ಪೂರ್ಣಗೊಂಡಿಲ್ಲ. ಪಟ್ಟಣದಲ್ಲಿ ಒಟ್ಟು 20 ವಾರ್ಡ್ ಗಳಿದ್ದು ಸುಮಾರು 40 ಸಾವಿರ ಜನಸಂಖ್ಯೆ ಇದೆ.

ಕಾಮಗಾರಿ ಗುತ್ತಿಗೆಯನ್ನು ಹೈದರಾಬಾದ್‌ನ ಎಎಸ್‌ಆರ್ ಎಂಜಿನಿಯರಿಂಗ್‌ ಮತ್ತು ಪ್ರಾಜೆಕ್ಟ್ ಲಿಮಿಟೆಡ್ ಕಂಪನಿಗೆ ವಹಿಸಲಾಗಿತ್ತು, ಪಟ್ಟಣ ಪಂಚಾಯಿತಿಯು ಅನುಷ್ಠಾನ ಹಾಗೂ ಕೆಯುಐಡಿಎಫ್‌ಸಿಗೆ ಯೋಜನೆಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಣೆ ಜವಾಬ್ದಾರಿ ನೀಡಿತ್ತು. 

ADVERTISEMENT

ಅರೆಬರೆ ಕಾಮಗಾರಿ: ಕಾಮಗಾರಿಯ ಆರಂಭದಲ್ಲಿ ಪಟ್ಟಣದ ವಾರ್ಡ್‌ಗಳಲ್ಲಿ ರಸ್ತೆಗಳನ್ನು ಅಗೆಯಲಾಯಿತು. ಪೈಪ್‌ಲೈನ್ ಅಳವಡಿಕೆಗಾಗಿ ಕುಣಿ ತೋಡಿ ಅರ್ಧಂಬರ್ಧ ಬಿಡಲಾಯಿತು, ದೇವಿನಗರ ಹಾಗೂ ಪಟ್ಟಣದ 14ನೇ ವಾರ್ಡಿನಲ್ಲಿ ಓವರ್‌ಹೆಡ್ ಟ್ಯಾಂಕ್ ಹಾಗೂ ನೆಲಮಟ್ಟದ ಟ್ಯಾಂಕ್ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳಲಿಲ್ಲ. ಐದು ವರ್ಷದಲ್ಲಿ ಮುಗಿಯಬೇಕಾದ ಕಾಮಗಾರಿ ಏಳು ವರ್ಷಗಳೇ ಆದರೂ ಪೂರ್ಣಗೊಂಡಿಲ್ಲ.

‘ಇದರಿಂದ ಸರ್ಕಾರದ ಕೋಟ್ಯಂತರ ರೂಪಾಯಿ ಹಣ ಹೊಳೆಯಲ್ಲಿ ಹುಣಸೆ ತೊಳೆದಂತೆ ಆಗಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೋಟಿಸ್‌ ಜಾರಿ: 5500 ಮನೆಗಳಿಗೆ ಪ್ರಾಯೋಗಿಕವಾಗಿ, 24X7 ನೀರು ಪೂರೈಸುವ ಯೋಜನೆ ಇದಾಗಿದ್ದು, ಎಲ್ಲ ವರ್ಗದವರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಯೋಜನೆಗೆ ಜಾರಿಗೊಳಿಸಲಾಗಿತ್ತು. ಆದರೆ ಕಾಮಗಾರಿ ಅನುಷ್ಠಾನ ವಿಳಂಬ ಹಾಗೂ ಕಳಪೆ ಗುಣಮಟ್ಟದ ಕಾಮಗಾರಿಯಿಂದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹೈದರಾಬಾದಿನ ಎಎಸ್ಆರ್ ಕಂಪನಿಗೆ ನೋಟೀಸ್ ಜಾರಿ ಮಾಡಿದ್ದರು.

ಕಳಪೆ ಕಾಮಗಾರಿ ಹಾಗೂ ಬಾಕಿ ಇರುವ ಕೆಲಸದ ವೆಚ್ಚಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಇರುವ ಗುತ್ತಿಗೆದಾರರ ಆಸ್ತಿ ಮಾಹಿತಿ ವಿವರ ನೀಡಲು ತಿಳಿಸಲಾಗಿದೆ. ಆದರೆ ಪಟ್ಟಣದಲ್ಲಿ ಗುತ್ತಿಗೆದಾರರ ಯಾವುದೇ ಆಸ್ತಿಗಳ ಮಾಹಿತಿ ಲಭ್ಯವಿಲ್ಲ.
– ಪರಶುರಾಮ, ಮುಖ್ಯಾಧಿಕಾರಿ ತೆಕ್ಕಲಕೋಟೆ

ಹಣ ಪಾವತಿಸದ ಗುತ್ತಿಗೆದಾರ

ಕಾಮಗಾರಿ ಕಳಪೆಯಾಗಿರುವುದರಿಂದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಅನುಸಾರ ಹೈದರಾಬಾದಿನ ಎಎಸ್ಆರ್ ಕಂಪನಿಗೆ ಒಪ್ಪಂದ ರದ್ದು ಮಾಡಿ ಜುಲೈ 2023 ರಲ್ಲಿ ಮುಕ್ತಾಯಗೊಳಿಸಿ ಆದೇಶಿಸಲಾಗಿತ್ತು. ಅದರನ್ವಯ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ದಿ ಮತ್ತು ಹಣಕಾಸು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರು ಅಂತಿಮ ಕಾಮಗಾರಿಯ ಅಳತೆ ಮಾಡಿ ಬಾಕಿ ಕೆಲಸ ಪೂರ್ಣಗೊಳಿಸಲು ಅಗತ್ಯವಿರುವ ವೆಚ್ಚವನ್ನು ಅಂದಾಜಿಸಿ ಗುತ್ತಿಗೆದಾರರಿಗೆ ₹ 36065864/-ನ್ನು ಮೊತ್ತವನ್ನು ಮರುಪಾವತಿಸುವಂತೆ ಆದೇಶಿಸಿದ್ದಾರೆ. ಆದರೆ ಗುತ್ತಿಗೆದಾರ ಈ ವರೆಗೆ ಪಾವತಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.