ADVERTISEMENT

ಹಂಪಿ: ನಕಲಿ ಗೈಡ್‌ಗಳಿಂದ ಇತಿಹಾಸಕ್ಕೆ ಅಪಚಾರ

ಹಣದಾಸೆಗೆ ಹೆಚ್ಚಿದ ಮಾರ್ಗದರ್ಶಿಗಳು; ಅಧಿಕೃತ ಗೈಡ್‌ಗಳ ಉಪಜೀವನಕ್ಕೆ ತೊಂದರೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಜೂನ್ 2022, 8:26 IST
Last Updated 16 ಜೂನ್ 2022, 8:26 IST
ಹಂಪಿಯಲ್ಲಿ ಕಲ್ಲಿನ ರಥದ ಬಗ್ಗೆ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುತ್ತಿರುವ ಗೈಡ್‌
ಹಂಪಿಯಲ್ಲಿ ಕಲ್ಲಿನ ರಥದ ಬಗ್ಗೆ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುತ್ತಿರುವ ಗೈಡ್‌   

ಹೊಸಪೇಟೆ (ವಿಜಯನಗರ): ವಿಶ್ವಪ್ರಸಿದ್ಧ ಹಂಪಿಯಲ್ಲಿ ನಕಲಿ ಗೈಡ್‌ಗಳ ಹಾವಳಿ ಹೆಚ್ಚಾಗಿದ್ದು, ಇತಿಹಾಸಕ್ಕೆ ಅಪಚಾರವಾಗುವ ರೀತಿಯಲ್ಲಿ ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂಬ ಗಂಭೀರ ಸ್ವರೂಪದ ಆರೋಪಗಳು ಕೇಳಿ ಬಂದಿವೆ.

ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಇಲ್ಲದವರು ಕೂಡ ‘ನಾವು ಗೈಡ್‌ಗಳು’ ಎಂದು ಹೇಳಿಕೊಂಡು ಪ್ರವಾಸಿಗರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಹೊಟ್ಟೆ ಪಾಡಿಗೆ ಗೈಡ್‌ ವೃತ್ತಿ ಮಾಡಿಕೊಂಡಿದ್ದರೆ ಯಾರೂ ತಕರಾರು ಮಾಡುತ್ತಿರಲಿಲ್ಲ. ಆದರೆ, ಇತಿಹಾಸಕ್ಕೆ ಅಪಚಾರವಾಗುವ ರೀತಿಯಲ್ಲಿ ಪ್ರವಾಸಿಗರಿಗೆ ಸುಳ್ಳು ಮಾಹಿತಿ ಕೊಡುತ್ತಿರುವುದರಿಂದ ಹಂಪಿಯಲ್ಲಿನ ಎಲ್ಲ ಗೈಡ್‌ಗಳಿಗೂ ಕೆಟ್ಟ ಹೆಸರು ಬರುತ್ತಿದೆ ಎನ್ನುವುದು ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಅಧಿಕೃತ ಮಾರ್ಗದರ್ಶಿಗಳ ಅಳಲು.

ಪ್ರವಾಸೋದ್ಯಮ ಇಲಾಖೆ, ಹಂಪಿ ಮಾರ್ಗದರ್ಶಿಗಳ ಸಂಘದಿಂದ ಮಾನ್ಯತೆ ಪಡೆದು 154 ಜನ ಅಧಿಕೃತ ಗೈಡ್‌ಗಳಾಗಿ ಹಂಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೀಸನ್‌ನಲ್ಲಿ ಗೈಡ್‌ ಮಾಡಲು ಪ್ರವಾಸಿಗರಿಂದ ದಿನಕ್ಕೆ ₹2,280 ಶುಲ್ಕ ಪಡೆಯುತ್ತಾರೆ. ನಾನ್‌ ಸೀಸನ್‌ನಲ್ಲಿ ₹1,000ದಿಂದ ₹1,500 ಪಡೆಯುತ್ತಾರೆ. ಬೆಳಿಗ್ಗೆ 9ರಿಂದ ಸಂಜೆ 6.30ರ ವರೆಗೆ ಪ್ರವಾಸಿಗರೊಂದಿಗೆ ಇದ್ದು, ಎಲ್ಲ ರೀತಿಯ ಮಾರ್ಗದರ್ಶನ ಮಾಡುತ್ತಾರೆ. ಆದರೆ, ನಕಲಿ ಗೈಡ್‌ಗಳು ಇಂತಿಷ್ಟೇ ಶುಲ್ಕ ಅಂತಿಲ್ಲ. ಅವರ ಮನಸ್ಸಿಗೆ ತೋಚಿದಂತೆ ಪ್ರವಾಸಿಗರಿಂದ ತೆಗೆದುಕೊಳ್ಳುತ್ತಾರೆ. ಅಲ್ಲದೇ ಸುಳ್ಳು ಮಾಹಿತಿ ಕೊಡುತ್ತಿದ್ದಾರೆ. ಹೆಚ್ಚೆಂದರೆ ಮೂರ್ನಾಲ್ಕು ಗಂಟೆಗಳಲ್ಲಿ ಪ್ರವಾಸಿಗರ ಜೊತೆ ಇದ್ದು ಹೋಗುತ್ತಾರೆ. ಇಂತಹವರ ಮೇಲೆ ಜಿಲ್ಲಾಡಳಿತ ನಿಯಂತ್ರಣ ಹೇರಬೇಕೆನ್ನುವುದು ಅಧಿಕೃತ ಗೈಡ್‌ಗಳ ಹಕ್ಕೊತ್ತಾಯ.

ADVERTISEMENT

‘ಅಧಿಕೃತ ಗೈಡ್‌ಗಳ ಸಂಖ್ಯೆ 154 ಇದ್ದರೆ, ಅನಧಿಕೃತವಾಗಿ ಕೆಲಸ ನಿರ್ವಹಿಸುತ್ತಿರುವವರ ಸಂಖ್ಯೆ ಇದಕ್ಕಿಂತಲೂ ಹೆಚ್ಚಿದೆ. ಸೀಸನ್‌ ಕಾಲದಲ್ಲಿ, ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌, ಜನವರಿಯಲ್ಲಿ ಈ ಸಂಖ್ಯೆ ದುಪ್ಪಟ್ಟಾಗುತ್ತದೆ. ಹಂಪಿಯಲ್ಲಿ ಜನಜಾತ್ರೆ ಇರುವುದರಿಂದ ಅದನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ಪ್ರವಾಸಿಗರು ಯಾವುದನ್ನೂ ಹೆಚ್ಚಿಗೆ ಪರಿಶೀಲಿಸುವುದಿಲ್ಲ’ ಎಂದು ಶ್ರೀ ವಿದ್ಯಾರಣ್ಯ ಪ್ರವಾಸಿ ಮಾರ್ಗದರ್ಶಿ ಸಂಘದ ಅಧ್ಯಕ್ಷ ಗೋಪಾಲ್‌ ತಿಳಿಸಿದರು.

‘ಸ್ಥಳೀಯ ಇತಿಹಾಸಕ್ಕೆ ದ್ರೋಹ ಬಗೆಯುವ ರೀತಿಯಲ್ಲಿ ಯಾರೇ ಗೈಡ್‌ ಮಾಡಿದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಯ ಕಾನೂನಿನಲ್ಲಿ ಅವಕಾಶ ಇದೆ. ಆದರೆ, ಅನೇಕ ಸಲ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

‘ನಕಲಿ ಗೈಡ್‌ಗಳು ಅಧಿಕೃತ ಗೈಡ್‌ಗಳು ತಾವೇ ಎಂದು ಹೇಳಿಕೊಳ್ಳುತ್ತಾರೆ. ಪ್ರವಾಸಿಗರಿಂದ ನಿಗದಿತ ಶುಲ್ಕಕ್ಕಿಂತ ಹೆಚ್ಚಿಗೆ ವಸೂಲಿ ಮಾಡುತ್ತಾರೆ. ಮೇಲಿಂದ ಸ್ಮಾರಕಗಳ ಬಗ್ಗೆ ತಪ್ಪು ಮಾಹಿತಿ ಕೊಡುತ್ತಾರೆ. ಎಷ್ಟೋ ಸಲ ಪ್ರವಾಸಿಗರಿಗೆ ಎಲ್ಲ ಮಾಹಿತಿ ಗೊತ್ತಿರುತ್ತದೆ. ಸುಳ್ಳು ಮಾಹಿತಿ ಕೊಟ್ಟಾಗ ಜಟಾಪಟಿಗಳು ನಡೆದಿವೆ. ಆದರೂ ಅವರು ಸುಧಾರಿಸಿಕೊಂಡಿಲ್ಲ. ಅವರನ್ನು ನಿಯಂತ್ರಿಸುವವರೆಗೆ ಇದು ನಿಲ್ಲುವುದಿಲ್ಲ’ ಎಂದು ಹಿರಿಯ ಗೈಡ್‌ ಈರಣ್ಣ ಪೂಜಾರಿ ಅಭಿಪ್ರಾಯ ಪಟ್ಟರು.

ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.