
ಕಂಪ್ಲಿ: ‘ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆಯಾಗದಿರುವುದನ್ನು ಗಮನಿಸಿ ಸರ್ಕಾರವೇ ಪೌತಿ ಖಾತೆ ಆಂದೋಲನದ ಮೂಲಕ ಅನುಕೂಲ ಕಲ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು’ ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ಹೇಳಿದರು.
ತಾಲ್ಲೂಕಿನ ಮೆಟ್ರಿ ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಇ-ಪೌತಿ ಆಂದೋಲನ ಮತ್ತು ಪಿಂಚಣಿ ಅದಾಲತ್‍ಗೆ ಚಾಲನೆ ನೀಡಿ, ಅಗತ್ಯ ದಾಖಲೆಗಳನ್ನು ಸ್ಥಳೀಯವಾಗಿಯೇ ಹಾಜರುಪಡಿಸಿ ಕುಟುಂಬದ ಎಲ್ಲರೂ ಒಮ್ಮತದಿಂದ ನಿರ್ಧಾರ ಮಾಡಿ ಆಸ್ತಿಯ ಇ-ಪೌತಿ ಖಾತೆ ಮಾಡಿಸಿಕೊಳ್ಳುವುದರಿಂದ ಕಚೇರಿಗೆ ಅಲೆಯುವುದು ತಪ್ಪುತ್ತದೆ ಎಂದರು.
ಪ್ರಸ್ತುತ ಗ್ರಾಮದಲ್ಲಿ 29 ಪೌತಿ ಅರ್ಜಿ ಸ್ವೀಕರಿಸಿದ್ದು, 11 ಅರ್ಜಿಗಳು ಸ್ಥಳದಲ್ಲಿಯೇ ಪರಿಶೀಲಿಸಿ ಪೌತಿ ಖಾತೆಗೆ ಅಳವಡಿಸಲಾಯಿತು. ಉಳಿದ 18 ಅರ್ಜಿಗಳು ಮರಣ ಪ್ರಮಾಣಪತ್ರ ಇಲ್ಲದ ಕಾರಣ ಮಹಜರ್ ಮಾಡಲು ಸೂಕ್ತ ದಾಖಲೆ ಪಡೆಯಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ನಾಗರಾಜ ಮತ್ತು ಸದಸ್ಯರು, ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ್, ಗ್ರಾಮ ಲೆಕ್ಕಾಧಿಕಾರಿ ಕೆ.ಎಂ. ಶಿವರುದ್ರಯ್ಯ, ಮುಖಂಡರಾದ ಹೊನ್ನಳ್ಳಿ ಗಂಗಾಧರ, ಹೊನ್ನಳ್ಳಿ ಶಿವಪುತ್ರಪ್ಪ, ಹೊಸಕೋಟೆ ಜಗದೀಶ್, ಸಿ.ಡಿ. ಮಹದೇವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.