ADVERTISEMENT

ಬಳ್ಳಾರಿ: ಇ-ಪೌತಿ ಖಾತೆಗೆ ಮಾಸಿಕ ಗುರಿ ನಿಗದಿ

ತಾಲ್ಲೂಕಿನಲ್ಲಿ 18,724 ಇ-ಪೌತಿ ಬಾಕಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:05 IST
Last Updated 17 ಡಿಸೆಂಬರ್ 2025, 8:05 IST
ಹೂವಿನಹಡಗಲಿ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿದರು
ಹೂವಿನಹಡಗಲಿ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಕಂದಾಯ ಇಲಾಖೆ ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿದರು   

ಹೂವಿನಹಡಗಲಿ: ‘ತಾಲ್ಲೂಕಿನಲ್ಲಿ ಮೃತರ ಹೆಸರಿನಲ್ಲೇ ಉಳಿದಿರುವ 18,724 ಜಮೀನಿನ ಖಾತೆಗಳನ್ನು ಅವರ ವಾರಸುದಾರರಿಂದ ಅಗತ್ಯ ದಾಖಲೆಗಳನ್ನು ಪಡೆದು ಪ್ರತಿ ತಿಂಗಳು 100 ರಂತೆ ಇ-ಪೌತಿ ಖಾತೆ ಮಾಡಿಕೊಡಬೇಕು’ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಗ್ರಾಮ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಕಂದಾಯ ಇಲಾಖೆಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ 2,491 ಖಾತೆಗಳನ್ನು ಇ-ಪೌತಿ ಮಾಡಲಾಗಿದೆ. ಬಾಕಿ ಇರುವ 16,233 ಖಾತೆಗಳನ್ನು ತಾಲ್ಲೂಕಿನಲ್ಲಿರುವ 28 ಗ್ರಾಮ ಆಡಳಿತಾಧಿಕಾರಿಗಳು ಮಾಸಿಕ ತಲಾ 100 ರಂತೆ ಎಲ್ಲ ಖಾತೆಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು ಎಂದು ಹೇಳಿದರು.

ತಾಲ್ಲೂಕಿನ 57 ಹೊಸ ಕಂದಾಯ ಗ್ರಾಮಗಳನ್ನು ಸರ್ಕಾರ ಘೋಷಿಸಿದೆ. ಈ ಪೈಕಿ 38 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬಾಕಿ 28 ಗ್ರಾಮಗಳ ಗ್ರಾಮಠಾಣಾ ನಕ್ಷೆಯನ್ನು ಅಂತಿಮಗೊಳಿಸಬೇಕು. ಬರುವ ಫೆಬ್ರವರಿಯಲ್ಲಿ ಸರ್ಕಾರ ಹಾವೇರಿಯಲ್ಲಿ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಿದ್ದು, ಇಲ್ಲಿನ 1800 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಶೇ 79ರಷ್ಟು ಪಹಣಿಗಳಿಗೆ ಖಾತೆದಾರರ ಆಧಾರ್ ಲಿಂಕ್ ಮಾಡಲಾಗಿದ್ದು, ಶೇ 90ರಷ್ಟು ಸಾಧನೆ ಮಾಡಬೇಕು. ಅಭಿಲೇಖಾಲಯದ ಹಳೇ ಕಂದಾಯ ದಾಖಲೆಗಳ ಗಣಕೀಕರಣ ವೇಗ ಹೆಚ್ಚಿಸಬೇಕು. ಈಗ ಪ್ರತಿ ದಿನ ಏಳು ಸಾವಿರ ಪುಟಗಳ ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು, ಸರ್ಕಾರದ ಸೂಚನೆ ಮೇರೆಗೆ 12,000 ಪುಟಗಳ ಸ್ಕ್ಯಾನಿಂಗ್ ಮಾಡಬೇಕು ಎಂದು ಹೇಳಿದರು. ತಹಶೀಲ್ದಾರ್ ಜಿ. ಸಂತೋಷಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪರಮೇಶ್ವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.