ಹೂವಿನಹಡಗಲಿ: ತಾಲ್ಲೂಕಿನ ಹಿರೇಹಡಗಲಿ ನಾಡ ಕಚೇರಿಗೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಶನಿವಾರ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.
ಕಂದಾಯ ದಾಖಲೆಗಳ ತಿದ್ದುಪಡಿ, ಜಮೀನುಗಳಿಗೆ ದಾರಿ, ವಸತಿ, ನಿವೇಶನ, ಪಿಂಚಣಿ ಸೌಲಭ್ಯ, ರಸ್ತೆ, ಚರಂಡಿಯ ಸಮಸ್ಯೆಗಳಿಗೆ ಕಿವಿಯಾದ ಡಿಸಿ, ಕೆಲ ಅರ್ಜಿಗಳನ್ನು ಸ್ಥಳದಲ್ಲೇ ಪರಿಹರಿಸಿದರು.
‘ಹಿರೇಹಡಗಲಿ ಗ್ರಾಮಠಾಣಾ ಸರಹದ್ದಿನ ಸರ್ಕಾರಿ ಭೂಮಿಯಲ್ಲಿ ದಶಕಗಳ ಹಿಂದೆ ನಿರ್ಮಿಸಿಕೊಂಡಿರುವ ಮನೆಗಳಿಗೆ ಗ್ರಾಮ ಪಂಚಾಯಿತಿಯವರು ಆಸ್ತಿ ದಾಖಲೆ ನೀಡುತ್ತಿಲ್ಲ. ಬೇರೆಡೆ ನಿವೇಶನ ಇಲ್ಲ, ವಾಸವಿರುವ ಜಾಗಕ್ಕೆ ಭದ್ರತೆಯಿಲ್ಲ. ಈ ಸಮಸ್ಯೆ ಹರಿಪರಿಸಬೇಕು’ ಎಂದು ಕೆಲವರು ಮನವಿ ಮಾಡಿದರು.
ಸರ್ಕಾರಿ ಭೂಮಿಯಲ್ಲಿ ಹಲವು ವರ್ಷಗಳಿಂದ ಮನೆ, ಗುಡಿಸಲು ಹಾಕಿಕೊಂಡವರಿಗೆ ‘ಉಪಗ್ರಾಮ’ ಯೋಜನೆ ಅಡಿ ಇ-ಸ್ವತ್ತು ನೀಡಲು ಅವಕಾಶವಿದೆ. ಗ್ರಾಮಠಾಣಾ ಸರ್ವೆ ಮಾಡಿಸಿ ಸರ್ಕಾರಿ ಭೂಮಿಯಲ್ಲಿ ವಾಸವಿರುವ ನೈಜ ಫಲಾನುಭವಿಗಳಿಗೆ ಇ-ಸ್ವತ್ತು ಕೊಡಿಸಲು ಪರಿಶೀಲಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಹೇಳಿದರು.
‘ಹಿರೇಹಡಗಲಿ ಕೆರೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕವಾಗಿದೆ. ₹11.50 ಕೋಟಿ ವೆಚ್ಚದ ಕಾಮಗಾರಿ ಕೈಗೊಂಡಿದ್ದರೂ ಸಣ್ಣ ನೀರಾವರಿ ಇಲಾಖೆಯವರು ಮಾಹಿತಿ ಫಲಕ ಹಾಕಿಲ್ಲ. ಕುಡುಗೋಲು ಮಟ್ಟಿ ಏತ ನೀರಾವರಿ ಯೋಜನೆಗೆ ಹತ್ತಾರು ಕೋಟಿ ಖರ್ಚಾಗಿದ್ದರೂ ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದ ಯೋಜನೆ ಚಾಲನೆಯಾಗಿಲ್ಲ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ದೂರಿದರು.
ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಶೀಲ್ದಾರ್ ಜಿ. ಸಂತೋಷಕುಮಾರ್, ತಾ.ಪಂ. ಇಒ ಪರಮೇಶ್ವರಪ್ಪ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ಅಂಬೇಡ್ಕರ್ ಸನಗುಂದ ಇದ್ದರು.
ಕೃಷಿಭೂಮಿಗೆ ಮೈಲಾರ ಶುಗರ್ಸ್ ತ್ಯಾಜ್ಯ
ಮೈಲಾರ ಶುಗರ್ಸ್ ಕಾರ್ಖಾನೆ ರಾಸಾಯನಿಕ ತ್ಯಾಜ್ಯವು ಸುತ್ತಮುತ್ತಲ ರೈತರ ಜಮೀನುಗಳಲ್ಲಿ ಹರಿಯುತ್ತಿದ್ದು, ಕೃಷಿಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಕಾರ್ಖಾನೆ ಸುತ್ತಮುತ್ತಲ ಪ್ರದೇಶ ಕಲುಷಿತಗೊಳ್ಳುತ್ತಿದ್ದರೂ ಬಾಧಿತ ಪ್ರದೇಶದಲ್ಲಿ ಸಿಎಸ್ಆರ್ ನಿಧಿಯನ್ನು ಖರ್ಚು ಮಾಡುತ್ತಿಲ್ಲ’ ಎಂದು ಮುಖಂಡ ಗುಂಡಿ ಚರಣರಾಜ್ ಗಮನ ಸೆಳೆದರು. ಕಾರ್ಖಾನೆಗೆ ನೋಟಿಸ್ ನೀಡಲು ಡಿಸಿ ಸೂಚಿಸಿದರು.
ಆಸ್ಪತ್ರೆ ನಿರ್ವಹಣೆಗೆ ಪ್ರಶಂಸೆ: ಹಿರೇಹಡಗಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯ ಸಾಮರ್ಥ್ಯ ಮೀರಿ ದಾಖಲಾಗಿದ್ದ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವುದನ್ನು ವೀಕ್ಷಿಸಿ ಆಸ್ಪತ್ರೆಯ ವೈದ್ಯ ಡಾ. ವಿನೋದ ಅವರನ್ನು ಪ್ರಶಂಸಿಸಿದರು. ಖಾಲಿಯಾಗಿದ್ದ ಔಷಧಿ ದಾಸ್ತಾನನ್ನು ತಕ್ಷಣ ಪೂರೈಸುವಂತೆ ಡಿಎಚ್ಒ ಅವರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.