
ತೆಕ್ಕಲಕೋಟೆ ಸಮೀಪದ ಸಿರಿಗೇರಿ ಗ್ರಾಮದ ನಾಡಕಛೇರಿಯ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಕಡಿತಗೊಳಿಸಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು
ತೆಕ್ಕಲಕೋಟೆ: ಸಮೀಪದ ಸಿರಿಗೇರಿ ಗ್ರಾಮದ ನಾಡಕಚೇರಿಯ ವಿದ್ಯುತ್ ಬಿಲ್ ಬಾಕಿ ಹಿನ್ನೆಲೆಯಲ್ಲಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಬುಧವಾರ ನಡೆದಿದೆ.
ಕಳೆದ 2025ರ ಮಾರ್ಚ್ ತಿಂಗಳಿಂದ ₹8,394 ವಿದ್ಯುತ್ ಬಿಲ್ ಪಾವತಿಸಿರಲಿಲ್ಲ, ಈ ಕುರಿತು ಜೆಸ್ಕಾಂ ಅಧಿಕಾರಿಗಳು ಎಚ್ಚರಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದಾಗಿ ನಾಡಕಚೇರಿಗೆ ವಿವಿಧ ದಾಖಲೆ, ಪ್ರಮಾಣಪತ್ರ ಹಾಗೂ ಆಡಳಿತಾತ್ಮಕ ಕೆಲಸಗಳಿಗಾಗಿ ದೂರದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು, ಗ್ರಾಮಸ್ಥರು, ಆನ್‌ಲೈನ್ ಸೇವೆ, ದಾಖಲೆ ಮುದ್ರಣ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೆ ದಾಖಲೆ ಪಡೆಯಲು ಪರದಾಡುವಂತಾಯಿತು.
ಸಮಸ್ಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದರಿಂದ, ಸಿರುಗುಪ್ಪ ತಹಶೀಲ್ದಾರ್ ಗೌಸಿಯಾ ಬೇಗಂ ಜೆಸ್ಕಾಂ ಎಇಇ ಅವರೊಂದಿಗೆ ಚರ್ಚಿಸಿದ ಬಳಿಕ ಗುರುವಾರದಿಂದ ವಿದ್ಯುತ್ ಸರಬರಾಜು ಪುನಃ ಆರಂಭಿಸಲಾಯಿತು.
ಸಾರ್ವಜನಿಕ ಸೇವೆ ಒದಗಿಸುವ ಮಹತ್ವದ ಸರ್ಕಾರಿ ಕಚೇರಿಯಲ್ಲಿ ಈ ರೀತಿಯ ಅವ್ಯವಸ್ಥೆ ಸರಿಯಲ್ಲ, ನಾಡಕಚೇರಿಗೆ ನಿರಂತರ ವಿದ್ಯುತ್ ವ್ಯವಸ್ಥೆ ಕಲ್ಪಿಸುವುದರ ಜತೆಗೆ, ಜನರೇಟರ್ ತರಹದ ಪರ್ಯಾಯ ವ್ಯವಸ್ಥೆ ಒದಗಿಸುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.