ADVERTISEMENT

ಬಳ್ಳಾರಿ: ನಿಂಬೆ ಬೆಳೆದು ಯಶಸ್ಸು ಕಂಡ ಎಂಜಿನಿಯರ್‌

ಸಿ.ಶಿವಾನಂದ
Published 19 ನವೆಂಬರ್ 2018, 9:56 IST
Last Updated 19 ನವೆಂಬರ್ 2018, 9:56 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ತಾಂಡಾದ ತಮ್ಮ ಹೊಲದಲ್ಲಿ ಬೆಳೆದಿರುವ ನಿಂಬೆ ಗಿಡಗಳೊಂದಿಗೆ ಕೆ.ಪಿ. ಉಮಾಪತಿ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ತಾಂಡಾದ ತಮ್ಮ ಹೊಲದಲ್ಲಿ ಬೆಳೆದಿರುವ ನಿಂಬೆ ಗಿಡಗಳೊಂದಿಗೆ ಕೆ.ಪಿ. ಉಮಾಪತಿ   

ಹಗರಿಬೊಮ್ಮನಹಳ್ಳಿ: ಸಾವಯವ ಕೃಷಿಯಲ್ಲಿ ನಿಂಬೆ ಹಣ್ಣು ಬೆಳೆದು ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ ತಾಲ್ಲೂಕಿನ ಕೋಗಳಿ ತಾಂಡಾದ ಕೆ.ಪಿ. ಉಮಾಪತಿ.

ವೃತ್ತಿಯಿಂದ ಎಂಜಿನಿಯರ್‌ ಆಗಿರುವ ಉಮಾಪತಿ ಅವರಿಗೆ ಕೃಷಿ ಪ್ರವೃತ್ತಿ. ಈ ಪ್ರವೃತ್ತಿ ಅವರ ಕೈ ಹಿಡಿದಿದೆ. ಹಿರಿಯರಿಂದ ತಮ್ಮ ಪಾಲಿಗೆ ಬಂದಿರುವ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿ ಮಾಡದೇ ಭಿನ್ನವಾಗಿ ಯೋಚಿಸಿದರು. ಅದರ ಪರಿಣಾಮ ಅದರಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಕೊಟ್ಟೂರು ಬಳಿಯಿರುವ ಚಿನ್ನೇನಹಳ್ಳಿ ಗ್ರಾಮದ ರೈತರಿಂದ ನಿಂಬೆ ಬೀಜ ತೆಗೆದುಕೊಂಡ ಬಂದ ಅವರು, ನಾಲ್ಕು ಎಕರೆ ಪ್ರದೇಶದಲ್ಲಿ 400 ಗಿಡಗಳನ್ನು ಬೆಳೆಸಿದ್ದಾರೆ. ಕೊಟ್ಟಿಗೆ ಗೊಬ್ಬರ ಮತ್ತು ಜೀವಾಮೃತದಿಂದ ಗಿಡಗಳನ್ನು ಆರೈಕೆ ಮಾಡಿದ್ದಾರೆ. ಇದರ ಫಲವಾಗಿ ಪ್ರತಿಯೊಂದು ಗಿಡದಲ್ಲಿ 250ರಿಂದ 300 ನಿಂಬೆಕಾಯಿಗಳು ಬೆಳೆದಿವೆ.

ADVERTISEMENT

ಗಿಡಗಳಿಗೆ ರೋಗದಕಾಟ ಇಲ್ಲ. ಇವರ ಅಕ್ಕಪಕ್ಕದ ಹೊಲಗಳಲ್ಲಿ ಚಳಿಗಾಲದಲ್ಲಿ ಕಜ್ಜಿ ಮತ್ತು ಮುಟುರು ರೋಗ ಕಾಣಿಸಿಕೊಂಡಿತು. ತಮ್ಮ ಹೊಲದಲ್ಲಿ ಬೇವಿನ ಎಣ್ಣೆ ಮತ್ತು ಸುಣ್ಣ ಸಿಂಪಡಿಸಿದ್ದರಿಂದ ರೋಗ ಸುಳಿಯಲಿಲ್ಲ. ಜಮೀನಿನ ಸುತ್ತ ₹ 3 ಲಕ್ಷ ವೆಚ್ಚದಲ್ಲಿ ಬೇಲಿ ಹಾಕಿಸಿದ್ದಾರೆ.

‘ನಿಂಬೆ ಗಿಡಗಳ ನಡುವೆ ಹುರುಳಿ ಅಂತರ ಬೆಳೆಯಾಗಿ ಬೆಳೆಸಿದ್ದಾರೆ. ಜಮೀನಿನ ಸುತ್ತಲೂ 50 ಬೇವಿನ ಗಿಡಗಳನ್ನು ಬೆಳೆಸಿದ್ದಾರೆ. ಬೇವಿನ ಗಿಡಗಳಿಂದ ಬೀಸುವ ಶುದ್ಧ ಗಾಳಿಯಿಂದ ನಿಂಬೆ ಗಿಡಗಳ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಅಷ್ಟೇ ಅಲ್ಲ, ನಿಂಬೆ ಕೂಡ ದೊಡ್ಡ ಗಾತ್ರದಲ್ಲಿ ಬೆಳೆಯುತ್ತಿವೆ. ನಮ್ಮ ಜಮೀನಿನ ಸಮೀಪದಿಂದ ಹಾದು ಹೋದರೆ ನಿಂಬೆಯ ಸುವಾಸನೆ ಎಂತಹವರನ್ನು ಆಕರ್ಷಿಸದೇ ಇರದು’ ಎಂದು ಕೆ.ಪಿ. ಉಮಾಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಳವೆ ಬಾವಿ ಕೊರೈಸಿ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರುಣಿಸುತ್ತಿದ್ದೇನೆ. ತೇವಾಂಶ ಕಾಪಾಡಲು ಎಲ್ಲ ಗಿಡಗಳ ಸುತ್ತ ತೆಂಗಿನ ಗರಿಗಳನ್ನು ಹಾಕಿದ್ದೇನೆ. ನೀರಿನ ಪ್ರಮಾಣ ಕಡಿಮೆಯಿದ್ದರೂ ತೇವಾಂಶ ಹಾಗೆಯೇ ಇರುತ್ತದೆ. ಇದರಿಂದ ಗಿಡಗಳು ಸಮೃದ್ಧವಾಗಿ ಬೆಳೆಯಲು ಸಹಕಾರಿಯಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.